ಬೇಡಜಂಗಮರನ್ನು ಇನ್ನಾದರೂ ಸರಕಾರ ಗುರುತಿಸಬೇಕಾಗಿದೆ

Update: 2022-07-01 19:30 GMT

ಮಾನ್ಯರೇ,

 ರಾಜ್ಯದಲ್ಲಿ ಬೇಡಜಂಗಮರ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಸಮಾಜವನ್ನು ತುಳಿಯುವ ಪ್ರಯತ್ನ ಸತತವಾಗಿ ನಡೆಯುತ್ತಲೇ ಇದೆ. ‘ಗೆಜೆಟಿಯರ್ ಸೂರ್ಯನಾಥ್ ಕಾಮತ್’ ವರದಿಯ ಪ್ರಕಾರ ವೀರಶೈವ ಪಂಥದಲ್ಲಿ ಬರುವ ಮಾಮೂಲಿ ಜಂಗಮರೇ ಬೇಡ ಜಂಗಮರು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಬೇಡ ಜಂಗಮರನ್ನು ಸ್ವಾಮಿಗಳು, ಅಯ್ಯನವರು, ಅಯ್ಯಗೋಳು ಹಿರೇಮಠ ಎಂಬ ಪದ ನಾಮಗಳಿಂದ ಸಂಬೋಧಿಸಲಾಗುತ್ತದೆ. ಇವರ ಕುಲಕಸುಬು ಧಾರ್ಮಿಕ ಭಿಕ್ಷಾಟನೆ. ಆದರೆ ಅಧಿಕಾರಕ್ಕೆ ಬಂದ ಸರಕಾರಗಳೆಲ್ಲವೂ ಬೇಡಜಂಗಮ ಸಮಾಜದವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ರದ್ದಾದ ಸುತ್ತೋಲೆಗಳನ್ನು ಅನುಸರಿಸುತ್ತಾ ಅಧಿಕಾರಿ ವರ್ಗದವರನ್ನು ಜಾತಿ ಪ್ರಮಾಣ ನೀಡದಂತೆ ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಬೇಡ ಜಂಗಮರು ಉನ್ನತ ಸ್ಥಾನದಲ್ಲಿರುವವರು, ಗುರುಗಳು ಎಂದು ಬಣ್ಣಬಣ್ಣದ ಮಾತನಾಡುವ ರಾಜಕಾರಣಿಗಳು, ಅಧಿಕಾರಿಗಳು ಒಮ್ಮೆ ಇವರ ಮನೆಗೆ ಬಂದು ಪರಿಶೀಲಿಸಿ ನೋಡಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದು ಎಂತಹ ಹೀನಾಯ ಸ್ಥಿತಿಯಲ್ಲಿದ್ದಾರೆ ಎಂಬುದು ಗೊತ್ತಾಗುತ್ತದೆ. ಬೇಡ ಜಂಗಮರನ್ನು ಕೇವಲ ಗುರುಗಳ ಸ್ಥಾನದಲ್ಲಿ ನೋಡುವುದರಿಂದ ಅವರ ಹೊಟ್ಟೆ ತುಂಬುವುದಿಲ್ಲ ಸ್ವಾಮಿ. ತಾಲೂಕು ಕಚೇರಿಗಳಲ್ಲಿ ಬೇಡಜಂಗಮ ಎಂಬ ಹೆಸರಿನಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದರೆ ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂಬ ಹೆಸರಿನಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ. ನಿಜ ಹೇಳಬೇಕೆಂದರೆ ವೀರಶೈವ ಲಿಂಗಾಯತ ಎಂಬುದು ಜಾತಿಯಲ್ಲ. ಅದೊಂದು ಪಂಥ. ಸುಮಾರು ಮೂರು ದಶಕಗಳಿಂದಲೂ ಬೇಡಜಂಗಮ ಸಮುದಾಯವನ್ನು ಪಟ್ಟಭದ್ರ ಹಿತಾಸಕ್ತಿಗಳು ತುಳಿಯುತ್ತಲೇ ಬಂದಿದ್ದಾರೆ. ರಾಜ್ಯದಲ್ಲಿ ಬೇಡ ಜಂಗಮರೇ ಇಲ್ಲ ಎನ್ನುವ ರಾಜಕಾರಣಿಗಳು, ಅಧಿಕಾರಿಗಳು ಬೆಂಗಳೂರಿನಲ್ಲಿ ನಿನ್ನೆ ನಡೆದ ಸತ್ಯಕ್ಕಾಗಿ ಪ್ರತಿಪಾದನೆ ಸಮಾವೇಶವೇ ಸಾಕ್ಷಿ. ಇಷ್ಟು ವರ್ಷ ನಿರ್ಲಕ್ಷಿಸುತ್ತಾ ಬಂದಿರುವ ಬೇಡಜಂಗಮ ಸಮುದಾಯವನ್ನು ಈಗಲಾದರೂ ಸರಕಾರ ಗುರುತಿಸಬೇಕಾಗಿದೆ. ಇನ್ನೂ ಕೆಲವರಿಗೆ ಹೇಳ ಬಯಸುವುದೇನೆಂದರೆ ನ್ಯಾಯಾಲಯದ ಆದೇಶಗಳು ಮತ್ತು ಸರಕಾರಿ ದಾಖಲೆಗಳು ಕಾನೂನಾತ್ಮಕ ದಾಖಲೆ ಪುರಾವೆಗಳಾಗಿವೆಯೇ ಹೊರತು, ವೈಯಕ್ತಿಕ ಅಭಿಪ್ರಾಯಗಳು ಒಂದು ಸಮುದಾಯದ ಮೇಲೆ ಎಂದಿಗೂ ಕಾನೂನಾತ್ಮಕವಾಗಿ ನ್ಯಾಯಾಲಯಗಳಲ್ಲಿ ನಿರೂಪಿಸುವ ದಾಖಲೆಗಳಲ್ಲ.

Similar News