ಒಡೆಸಾದಲ್ಲಿ ನಾಗರಿಕರ ಮೇಲೆ ರಶ್ಯ ಕ್ಷಿಪಣಿ ದಾಳಿ: ಉಕ್ರೇನ್ ಆರೋಪ

Update: 2022-07-02 16:04 GMT

ಕೀವ್, ಜು.2: ಬಂದರು ನಗರ ಒಡೆಸಾದ ಮೇಲೆ ರಶ್ಯ ಶುಕ್ರವಾರ ನಡೆಸಿದ ಕ್ಷಿಪಣಿ ದಾಳಿಯಲ್ಲಿ, ಬಂದರಿನ ಬಳಿಯಿದ್ದ ಕಟ್ಟಡ ಮತ್ತು ರೆಸಾರ್ಟ್ಗೆ ವ್ಯಾಪಕ ಹಾನಿಯಾಗಿದೆ. ಕನಿಷ್ಟ 21 ಮಂದಿ ನಾಗರಿಕರು ಮೃತಪಟ್ಟಿದ್ದು ರಶ್ಯವು ಜನವಸತಿ ಪ್ರದೇಶವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ ಎಂದು ಉಕ್ರೇನ್ ಅಧಿಕಾರಿಗಳು ಆರೋಪಿಸಿದ್ದಾರೆ.

 
ಇದು ಆಕಸ್ಮಿಕ ಅಥವಾ ಪ್ರಮಾದವಶಾತ್ ಆದ ಘಟನೆಯಲ್ಲ. ರಶ್ಯದ ಉದ್ದೇಶಪೂರ್ವಕ ಭಯೋತ್ಪಾದನಾ ಕ್ರಿಯೆಯಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ಅಂತಸ್ತುಗಳು ಒಂಬತ್ತು ಅಂತಸ್ತಿನ ಕಟ್ಟಡವನ್ನು ಹೊಡೆದುರುಳಿಸಿವೆ. 

ಆ ಕಟ್ಟಡದಲ್ಲಿ ಯೋಧರಿರಲಿಲ್ಲ, ಅಥವಾ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿಲ್ಲ. ಅಲ್ಲಿ ಜನಸಾಮಾನ್ಯರು ವಾಸಿಸುತ್ತಿದ್ದರು. ಅವರಲ್ಲಿ 21 ಮಂದಿ ಮೃತಪಟ್ಟಿದ್ದು ಮೃತರಲ್ಲಿ 12 ವರ್ಷದ ಬಾಲಕನೂ ಸೇರಿದ್ದಾನೆ. ಇದು ಭಯೋತ್ಪಾದನಾ ಪ್ರಕ್ರಿಯೆಯಲ್ಲವೇ ? ಎಂದವರು ಪ್ರಶ್ನಿಸಿದ್ದಾರೆ.
 
ಕಪ್ಪು ಸಮುದ್ರ ಪ್ರದೇಶದಿಂದ ಹಾರಿಬಂದ ವಿಮಾನವು ಅತ್ಯಂತ ಬಲಿಷ್ಟವಾದ ಕ್ಷಿಪಣಿಗಳನ್ನು ನಮ್ಮ ಮೇಲೆ ಉದುರಿಸಿದೆ ಎಂದು ಒಡೆಸಾ ಜಿಲ್ಲೆಯ ಸಹಾಯಕ ಅಧಿಕಾರಿ ಸೆರ್ಗಿಯ್ ಬ್ರಾಚುಕ್ ಹೇಳಿದ್ದಾರೆ. ನಾಗರಿಕರ ಮೇಲಿನ ದಾಳಿ ಕ್ರೂರ ಮತ್ತು ಅಮಾನವೀಯ ಕೃತ್ಯವಾಗಿದೆ. 

ರಶ್ಯದ ಆಕ್ರಮಣಕಾರನ ಉದ್ದೇಶ ಮತ್ತೊಮ್ಮೆ ಜಗಜ್ಜಾಹೀರಾಗಿದೆ ಎಂದು ಜರ್ಮನ್ ಸರಕಾರದ ವಕ್ತಾರ ಸ್ಟೀಫನ್ ಹೆಬಿಸ್ಟ್ರೀಟ್ ಹೇಳಿದ್ದಾರೆ. ಆದರೆ ಈ ಆರೋಪವನ್ನು ರಶ್ಯ ನಿರಾಕರಿಸಿದೆ. ರಶ್ಯದ ಸಶಸ್ತ್ರ ಪಡೆಗಳು ನಾಗರಿಕರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಲು ಸಾಧ್ಯವೇ ಇಲ್ಲ ಎಂಬ ಅಧ್ಯಕ್ಷರ ಹೇಳಿಕೆಯನ್ನು ಪುನರುಚ್ಚರಿಸುತ್ತೇವೆ ಎಂದು ರಶ್ಯ ಅಧ್ಯಕ್ಷರ ಕಚೇರಿಯ ವಕ್ತಾರ ಡಿಮಿಟ್ರಿ ಪೆಸ್ಕೋವ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News