ಸರ್ವಪಕ್ಷಗಳ ಸಭೆಗೆ ಪ್ರಧಾನಿ ಗೈರುಹಾಜರಿಯ ಬಗ್ಗೆ ಸರಕಾರವನ್ನು ಪ್ರಶ್ನಿಸಿದ ಪ್ರತಿಪಕ್ಷಗಳು
ಹೊಸದಿಲ್ಲಿ: ಸಂಸತ್ತಿನ ಮುಂಗಾರು ಅಧಿವೇಶನ ನಾಳೆ(ಸೋಮವಾರ) ಆರಂಭವಾಗಲಿದ್ದು, ಸಂಸತ್ತಿನ ಅನೆಕ್ಸ್‌ನಲ್ಲಿ ಇಂದು ಸರ್ವಪಕ್ಷಗಳ ಸಭೆ ನಡೆಯುತ್ತಿದೆ. ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರುಹಾಜರಿಯ ಬಗ್ಗೆ ಪ್ರತಿಪಕ್ಷಗಳು ಸರಕಾರವನ್ನು ಪ್ರಶ್ನಿಸಿವೆ.
ಸಂಸತ್ತಿನ ಸುಗಮ ಕಲಾಪಕ್ಕೆ ಪ್ರಧಾನಮಂತ್ರಿ ಸರ್ವಪಕ್ಷ ಸಭೆ ಕರೆದು, ಸಮಸ್ಯೆಗಳ ಕುರಿತು ಚರ್ಚಿಸಿ ಒಮ್ಮತ ಮೂಡಿಸುವುದು ವಾಡಿಕೆ.
"ಮುಂಬರುವ ಸಂಸತ್ತಿನ ಅಧಿವೇಶನದ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಇದೀಗ ಆರಂಭವಾಗಿದೆ ಹಾಗೂ ಎಂದಿನಂತೆ ಪ್ರಧಾನಿ ಗೈರುಹಾಜರಾಗಿದ್ದಾರೆ. ಇದು 'ಅಸಂಸದೀಯ' ಅಲ್ಲವೇ?" ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಸಂಸತ್ ಅಧಿವೇಶನಕ್ಕೂ ಮೊದಲು ಸುತ್ತೋಲೆಯೊಂದನ್ನು ಹೊರಡಿಸಿರುವ ಕೇಂದ್ರ ಸರಕಾರವು ಕೆಲ 'ಅಸಂಸದೀಯ' ಪದಗಳನ್ನು ಬಳಸದಂತೆ ತಿಳಿಸಿತ್ತು
ಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಸಂಸತ್ತಿನ ಸುಗಮ ಕಲಾಪವನ್ನು ಖಚಿತಪಡಿಸಿಕೊಳ್ಳಲು ಪಕ್ಷಗಳನ್ನು ಒತ್ತಾಯಿಸಿದರು.
ಮಾನ್ಸೂನ್ ಅಧಿವೇಶನವು ಆಗಸ್ಟ್ 12 ರವರೆಗೆ ಮುಂದುವರಿಯುವ ಸಾಧ್ಯತೆಯಿದೆ.
ಸಭೆಯಲ್ಲಿ ಬಿಜೆಪಿಯ ರಾಜನಾಥ್ ಸಿಂಗ್, ಪಿಯೂಷ್ ಗೋಯಲ್, ಪ್ರಹ್ಲಾದ್ ಜೋಶಿ, ಅರ್ಜುನ್ ಮೇಘವಾಲ್ ಹಾಗೂ ಮುರಳೀಧರನ್ ಭಾಗವಹಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಚೌಧರಿ ಹಾಗೂ ಜೈರಾಮ್ ರಮೇಶ್ ಪ್ರತಿನಿಧಿಸುತ್ತಿದ್ದಾರೆ.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದಿಂದ ಶರದ್ ಪವಾರ್ ಹಾಗೂ ಸುಪ್ರಿಯಾ ಸುಳೆ, ಸಂಯುಕ್ತ ಜನತಾ ದಳನಿಂದ ರಾಮನಾಥ್ ಠಾಕೂರ್, ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್ ಹಾಗೂ ಅಕಾಲಿದಳದಿಂದ ಹರ್‌ಸಿಮ್ರತ್ ಕೌರ್ ಸಹಿತ ಬಹುತೇಕ ಪ್ರತಿಪಕ್ಷ ನಾಯಕರು ಸಭೆಯಲ್ಲಿ ಹಾಜರಿದ್ದರು. ಆದರೆ ಪ್ರಧಾನಿ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
All Party Meeting to discuss forthcoming session of Parliament has just begun and the Prime Minister as usual is absent. Isn’t this ‘unparliamentary’?
— Jairam Ramesh (@Jairam_Ramesh) July 17, 2022