'ಅಗ್ನಿಪಥ್' ಆಕಾಂಕ್ಷಿಗಳಿಗೆ ಜಾತಿ ಪ್ರಮಾಣ ಪತ್ರ ಯಾಕೆ ?: ಪ್ರತಿಪಕ್ಷಗಳ ಪ್ರಶ್ನೆ

Update: 2022-07-19 16:05 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ, ಜು. 19: ‘ಅಗ್ನಿಪಥ’ ಯೋಜನೆ ಮೂಲಕ ಸೇನಾ ನೇಮಕಾತಿಗೆ ಜಾತಿ ಹಾಗೂ ಧರ್ಮದ ಪ್ರಮಾಣ ಪತ್ರಗಳು ಅಗತ್ಯ ಇದೆಯೇ ? ಕೇಂದ್ರ ಸರಕಾರ ‘ಅಗ್ನಿವೀರರ’ ಬದಲಿಗೆ ‘ಜಾತಿ ವೀರ’ರನ್ನು ಸೃಷ್ಟಿಸಲು ಬಯಸುತ್ತಿದೆಯೇ? ಎಂದು ಪ್ರತಿಪಕ್ಷಗಳ ನಾಯಕರು ಮಂಗಳವಾರ ಪ್ರಶ್ನಿಸಿದ್ದಾರೆ.

ಭಾರತೀಯ ಸೇನೆಯ ನೇಮಕಾತಿ ರ್ಯಾಲಿಯ ಕುರಿತ ಅಧಿಸೂಚನೆ ಅಭ್ಯರ್ಥಿಗಳು ತಹಶೀಲ್ದಾರರು ಅಥವಾ ಜಿಲ್ಲಾಧಿಕಾರಿಯಿಂದ ಜಾತಿ ಪ್ರಮಾಣ ಪತ್ರವನ್ನು ತರುವಂತೆ ತಿಳಿಸಿದೆ. ಇದಲ್ಲದೆ ಜಾತಿ ಪ್ರಮಾಣ ಪತ್ರದಲ್ಲಿ ತಮ್ಮ ಧರ್ಮವಾದ ಸಿಕ್ಖ್, ಹಿಂದೂ, ಮುಸ್ಲಿಂ ಅಥವಾ ಕ್ರಿಶ್ಚಿಯನ್ ಎಂದು ಉಲ್ಲೇಖಿಸದೇ ಇದ್ದರೆ ಅಭ್ಯರ್ಥಿಗಳು ತಹಶೀಲ್ದಾರ್ ಅಥವಾ ಉಪ ವಿಭಾಗೀಯ ದಂಡಾಧಿಕಾರಿಯಿಂದ ಧರ್ಮದ ಪ್ರಮಾಣ ಪತ್ರವನ್ನು ತರಬೇಕು ಎಂದು ಸೂಚಿಸಿದೆ. 

ʼಸಶಸ್ತ್ರ ಪಡೆಗಳಲ್ಲಿ ಮೀಸಲಾತಿಯ ಅವಕಾಶ ಇಲ್ಲದೇ ಇರುವಾಗ ತಮ್ಮ ಜಾತಿಯನ್ನು ತಿಳಿಸುವಂತೆ ಸೇನಾ ಆಕಾಂಕ್ಷಿಗಳಲ್ಲಿ ಸೇನೆ ಯಾಕೆ ಕೇಳುತ್ತಿದೆ   ಎಂದು ಪ್ರತಿಪಕ್ಷಗಳ ಹಲವು ನಾಯಕರು ಪ್ರಶ್ನಿಸಿದ್ದಾರೆ. 

ಸೇನೆಯಲ್ಲಿ ನಿಯೋಜಿಸಲು ದಲಿತರು, ಆದಿವಾಸಿಗಳು ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದವರನ್ನು ಪ್ರಧಾನಿ ನರೇಂದ್ರ ಮೋದಿ ಪರಿಗಣಿಸುತ್ತಿಲ್ಲವೇ ಎಂದು ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಪ್ರಶ್ನಿಸಿದ್ದಾರೆ. ಮೋದಿ ಸರಕಾರದ ‘ಕೊಳೆತ ಮುಖ’ ಈಗ ದೇಶದ ಮುಂದೆ ಬಹಿರಂಗವಾಗಿದೆ ಎಂದು ಅವರು ಹೇಳಿದರು. 

ಸೇನಾ ನೇಮಕಾತಿ ಸಂದರ್ಭ ಅಭ್ಯರ್ಥಿಗಳಲ್ಲಿ ಜಾತಿ ಪ್ರಶ್ನಿಸುತ್ತಿರುವುದು ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲು ಎಂದು ಸಿಂಗ್ ಹೇಳಿದ್ದಾರೆ. ‘‘ಮೋದಿ ಜೀ, ನೀವು ಅಗ್ನಿವೀರರನ್ನು ರೂಪಿಸಲು ಬಯಸುತ್ತಿರೋ ಅಥವಾ ಜಾತಿವೀರರನ್ನೋ?’’ ಎಂದು ಸಿಂಗ್ ಪ್ರಶ್ನಿಸಿದ್ದಾರೆ. ‘‘ಸಂಘ’’ದ ಜಾತಿವಾದಿ ಸರಕಾರ ಸೇನಾ ಪಡೆಯ ಶಾಶ್ವತ ನೇಮಕಾತಿಗೆ ಅವರ ಜಾತಿ ಹಾಗೂ ಧರ್ಮದ ಆಧಾರದಲ್ಲಿ ಶೇ. 75 ಅಗ್ನಿಪಥ್ ಸಿಬ್ಬಂದಿಯನ್ನು ಅನರ್ಹಗೊಳಿಸಲಿದೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಪ್ರತಿಪಾದಿಸಿದ್ದಾರೆ. 

ಅಗ್ನಿಪಥ್ ಯೋಜನೆ ಮೂಲಕ ಸೇನೆಗೆ ತಾತ್ಕಾಲಿಕ ನೇಮಕಾತಿಗೆ ಜಾತಿ ಪ್ರಮಾಣಪತ್ರ ಯಾಕೆ ಬೇಕು ? ಎಂಬ ಬಗ್ಗೆ ಸಂಬಂಧಿತ ಇಲಾಖೆಯ ಅಧಿಕಾರಿಗಳು ಸ್ಪಷ್ಟೀಕರಣ ನೀಡಬೇಕು ಎಂದು ಜೆಡಿ (ಯು) ನಾಯಕ ಉಪೇಂದ್ರ ಕುಶ್ವಾಹ ಅವರು ಹೇಳಿದ್ದಾರೆ. 
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯ ವಕ್ತಾರ ಸಂಬಿತ್ ಪಾತ್ರಾ, ಸ್ವಾತಂತ್ರ್ಯ ಪೂರ್ವದಿಂದಲೇ ಸೇನಾ ಆಕಾಂಕ್ಷಿಗಳು ತಮ್ಮ ಧರ್ಮ ಹಾಗೂ ಜಾತಿಯನ್ನು ತಿಳಿಸುವ ಅಗತ್ಯತೆ ಇತ್ತು. ಮೋದಿ ಸರಕಾರ ಅದನ್ನು ಬದಲಾಯಿಸಿಲ್ಲ ಎಂದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News