ಡೋಕ್ಲಾಂ ಬಳಿ ಚೀನಾ ಅತಿಕ್ರಮಣ: ಉಪಗ್ರಹ ಚಿತ್ರಗಳಿಂದ ಬಹಿರಂಗ

Update: 2022-07-20 01:50 GMT

ಹೊಸದಿಲ್ಲಿ: ಐದು ವರ್ಷ ಹಿಂದೆ ಭಾರತ ಹಾಗೂ ಚೀನಾ ನಡುವಿನ ಸಂಘರ್ಷಕ್ಕೆ ವೇದಿಕೆಯಾದ ಡೋಕ್ಲಾಂ ಪ್ರಸ್ಥಭೂಮಿಯ 9 ಕಿಲೋಮೀಟರ್ ದೂರದಲ್ಲಿ ಚೀನಾ ನಿರ್ಮಿಸಿದ ಗ್ರಾಮದಲ್ಲಿ ಇದೀಗ ಅಕ್ಷರಶಃ ಪ್ರತಿ ಮನೆಯ ಮುಂದೆಯೂ ಕಾರುಗಳು ನಿಂತಿರುವುದು ಉಪಗ್ರಹ ಚಿತ್ರಗಳಲ್ಲಿ ಕಂಡುಬರುತ್ತಿದೆ ಎಂದು ndtv.com ವರದಿ ಮಾಡಿದೆ.

ಮಹತ್ವದ ಅಂಶವೆಂದರೆ ಚೀನಾ ಪಾಂಗ್ಡಾ ಎಂದು ಕರೆದಿರುವ ಈ ಗ್ರಾಮ ವಾಸ್ತವವಾಗಿ ಭೂತಾನ್‍ನ ಭೂಪ್ರದೇಶಕ್ಕೆ ಸೇರುತ್ತದೆ. ಪಾಂಗ್ಡಾದುದ್ದಕ್ಕೂ ಎಲ್ಲ ಋತುಮಾನಗಳಲ್ಲಿ ಸರಕು ಸಾಗಾಣಿಕೆ ಮಾಡಬಹುದಾದ ಅತ್ಯುತ್ತಮ ರಸ್ತೆಗಳನ್ನು ನಿರ್ಮಿಸಲಾಗಿದ್ದು, ದೊಡ್ಡ ಪ್ರಮಾಣದಲ್ಲಿ ಭೂತಾನ್‍ನ ಜಾಗವನ್ನು ಚೀನಾ ಕಬಳಿಕೆ ಮಾಡಿರುವುದು ಕಂಡುಬರುತ್ತದೆ. ಇದು ಭೂತಾನ್ ಗಡಿಗೆ 10 ಕಿಲೋಮೀಟರ್ ದೂರದಲ್ಲಿದ್ದು, ಅಮೋ ಚೂ ನದಿ ದಂಡೆಯಲ್ಲಿದೆ.

ಅಮೊ ಚೂ ಉದ್ದಕ್ಕೂ ಚೀನಾ ನಿರ್ಮಾಣ ಕಾರ್ಯ ಕೈಗೊಂಡಲ್ಲಿ ಚೀನಾ ಪಡೆಗಳು ಭಾರತದ ಆಯಕಟ್ಟಿನ ಪರ್ವತಶ್ರೇಣಿಯನ್ನು ಸುಲಭವಾಗಿ ತಲುಪಬಹುದಾಗಿದೆ. ಭಾರತದ ಜತೆ ಈಶಾನ್ಯ ರಾಜ್ಯಗಳನ್ನು ಸಂಪರ್ಕಿಸುವ ಸೂಕ್ಷ್ಮ ಎನಿಸಿದ ಸಿಲಿಗುರಿ ಕಾರಿಡಾರ್‍ಗೆ ಇದು ನೇರ ಪ್ರವೇಶ ಕಲ್ಪಿಸಲಿದೆ.

2017ರಲ್ಲಿ ಚೀನಾದ ಕಾರ್ಮಿಕರು ಡೋಕ್ಲಾಂನ ಝಂಪೇರಿ ಎಂಬ ಪರ್ವತ ಶ್ರೇಣಿಗೆ ಆಗಮಿಸುವುದನ್ನು ಭಾರತೀಯ ಸೈನಿಕರು 2017ರಲ್ಲಿ ತಡೆದಿದ್ದರು. ಇದೀಗ ಭಾರತದ ರಕ್ಷಣಾ ವ್ಯವಸ್ಥೆಯನ್ನು ಪಶ್ಚಿಮದಿಂದ ಭೇದಿಸಿ ಈ ಪರ್ವತ ಶ್ರೇಣಿಗೆ ಪರ್ಯಾಯ ಮಾರ್ಗದಿಂದ ಪ್ರವೇಶ ಪಡೆಯುವ ಆತಂಕ ಎದುರಾಗಿದೆ.

"ಪಾಂಗ್ಡಾ ಗ್ರಾಮ ಮತ್ತು ಅದರ ಉತ್ತರ ಹಾಗೂ ದಕ್ಷಿಣಕ್ಕೆ ಇರುವ ಗ್ರಾಮಗಳು ಚೀನಾ ಝಂಪೇರಿ ಪರ್ವತ ಶ್ರೇಣಿಯ ಮೇಲೆ ಹಾಗೂ ಡೋಕ್ಲಾಂ ಪ್ರಸ್ಥಭೂಮಿಯ ಮೇಲೆ ಕಾನೂನುಬದ್ಧ ಪ್ರಭುತ್ವ ಸಾಧಿಸಲು ಮುಂದಾಗಿರುವುದಕ್ಕೆ ಉತ್ತಮ ನಿದರ್ಶನ" ಎಂದು 2017ರ ಸಂಘರ್ಷದ ವೇಳೆ ಪೂರ್ವ ಸೇನಾ ಕಮಾಂಡರ್ ಆಗಿದ್ದ ಲೆಫ್ಟಿನೆಂಟ್ ಜನರಲ್ ಪ್ರವೀಣ್ ಬಕ್ಷಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News