ಅಧಿಕವಾಗಿ ಬಿಸಿಯಾದ ಬ್ಯಾಟರಿ: ಶೋರೂಂನಲ್ಲೇ 7 ಇ-ಸ್ಕೂಟರ್ ಭಸ್ಮ

Update: 2022-07-20 02:37 GMT
Photo: ANI

ಪುಣೆ: ಇಲ್ಲಿನ ಕೊಂಡ್ವಾ-ಬಿಬ್ವೇವಾಡಿ ರಸ್ತೆಯ ಶೋರೂಂ ಒಂದರಲ್ಲಿ ಇ-ಸ್ಕೂಟರ್‌ನ ಬ್ಯಾಟರಿ ಅಧಿಕವಾಗಿ ಬಿಸಿಯಾದ ಕಾರಣದಿಂದ ಬೆಂಕಿ ಅನಾಹುತ ಸಂಭವಿಸಿ ಸುಮಾರು ಏಳು ಲಕ್ಷ ರೂಪಾಯಿ ಮೌಲ್ಯದ ಏಳು ದ್ವಿಚಕ್ರ ವಾಹನಗಳು ಭಸ್ಮವಾಗಿವೆ.

ಸೋಮವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಾಧ್ಯತೆಯನ್ನು ಅಲ್ಲಗಳೆದಿರುವ ಅಗ್ನಿಶಾಮಕ ಅಧಿಕಾರಿ ಪ್ರದೀಪ್ ಖೇಡೇಕರ್, "ಬ್ಯಾಟರಿ ಚಾರ್ಜ್ ಮಾಡುವ ವೇಳೆ ಬ್ಯಾಟರಿ ಅಧಿಕವಾಗಿ ಬಿಸಿಯಾದ ಕಾರಣದಿಂದ ಬೆಂಕಿ ಅನಾಹುತ ಸಂಭವಿಸಿರಬೇಕು ಎಂದು ಶಂಕಿಸಲಾಗಿದೆ. ವಾಹನಗಳ ಚಾಸಿಗಳು ಮಾತ್ರ ಸ್ಥಳದಲ್ಲಿ ಕಂಡುಬರುತ್ತಿವೆ. ಎಂಜಿನ್, ಬ್ಯಾಟರಿ ಮತ್ತು ಫೈಬರ್ ಭಾಗ ಸಂಪೂರ್ಣವಾಗಿ ಭಸ್ಮವಾಗಿವೆ" ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಅಂಥ ಸಾಧ್ಯತೆಯನ್ನು ಶೋರೂಂ ಮಾಲಕ ಧನೇಶ್ ಓಸ್ವಾಲ್ ಅಲ್ಲಗಳೆದಿದ್ದಾರೆ. ಸಮಗ್ರ ತನಿಖೆಯಿಂದಷ್ಟೇ ಬೆಂಕಿಯ ಕಾರಣ ತಿಳಿಯಲಿದೆ ಎನ್ನುವುದು ಅವರ ವಾದ. 350 ಚದರ ಅಡಿ ವಿಸ್ತೀರ್ಣದ ಶೋರೂಂನಲ್ಲಿ ಘಟನೆ ವೇಳೆ 16 ಇ-ಸ್ಕೂಟರ್‌ಗಳಿದ್ದವು. 9 ವಾಹನಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಭಸ್ಮವಾದ ಪ್ರತಿ ಇ-ಸ್ಕೂಟರ್‌ ಗಳ ಬೆಲೆ ತಲಾ ಒಂದು ಲಕ್ಷ ರೂಪಾಯಿ ಎಂದು ಹೇಳಿದ್ದಾರೆ.

ಗ್ರಾಹಕರ ಬಳಿ ಸಿಬ್ಬಂದಿ ವ್ಯವಹರಿಸುತ್ತಿದ್ದ ವೇಳೆ ಒಂದು ವಾಹನದಲ್ಲಿ ಹೊಗೆ ಕಂಡುಬಂತು. ಇತರ ಆರು ವಾಹನಗಳಿಗೆ ಬೆಂಕಿ ತಕ್ಷಣವೇ ವ್ಯಾಪಿಸಿಕೊಂಡಿತು. ಇ-ಸ್ಕೂಟರ್‌ ಗಳನ್ನು ತಪಾಸಣೆ ಮಾಡುವಂತೆ ಉತ್ಪಾದಕ ಕಂಪನಿಗೆ ಮನವಿ ಮಾಡಿದ್ದೇವೆ ಎಂದು ಅವರು ಸ್ಪಷ್ಟಪಡಿಸಿರುವುದಾಗಿ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News