ಪ್ರಧಾನಿ ಮೋದಿ ಉದ್ಘಾಟಿಸಿದ ನಾಲ್ಕನೇ ದಿನದಲ್ಲೇ ಕುಸಿದ ಉತ್ತರಪ್ರದೇಶದ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ ವೇ !

Update: 2022-07-21 11:58 GMT
Photo: Twitter Screengrab

ನೋಯ್ಡ: ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಕನಸಿನ ಯೋಜನೆಯಾದ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ನಾಲ್ಕನೇ ದಿನಕ್ಕೇ (ಬುಧವಾರ) ಅದರ ಭಾಗವೊಂದು ಕುಸಿದಿದೆ. ಎಕ್ಸ್‌ಪ್ರೆಸ್‌ವೇಯ 195 ಕಿಮೀ ದೂರದಲ್ಲಿರುವ ಚಿರಿಯಾ ಸೇಲಂಪುರ ಬಳಿ ಚಿತ್ರಕೂಟ ಲೇನ್‌ಗೆ ಹೋಗುವ ರಸ್ತೆ ಕುಸಿದಿದೆ ಎಂದು amarujala ವರದಿ ಮಾಡಿದೆ. ಪೈಪ್‌ಲೈನ್ ಒಡೆದು ಮಣ್ಣು ಕುಸಿದಿದೆ ಎಂದು ಹೇಳಲಾಗುತ್ತಿದ್ದು, ಇದರಿಂದಾಗಿ ಎರಡು ಅಡಿ ಅಗಲ ಮತ್ತು ಆರು ಅಡಿ ಉದ್ದದ ಹೊಂಡವೊಂದು ಸೃಷ್ಟಿಯಾಗಿದೆ.

ಬುಧವಾರ ರಾತ್ರಿ ರಸ್ತೆ ಕುಸಿತದಿಂದ ಎರಡು ಕಾರು ಹಾಗೂ ಒಂದು ಬೈಕ್ ಅಪಘಾತಕ್ಕೀಡಾಗಿದೆ. ದಾರಿಹೋಕರು ಸ್ಥಳವನ್ನು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಇದರಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಎಕ್ಸ್‌ಪ್ರೆಸ್‌ವೇಯಲ್ಲಿ ರಸ್ತೆ ಕುಸಿದಿರುವ ಬಗ್ಗೆ ಮಾಹಿತಿ ತಿಳಿದ ತಕ್ಷಣ ಆಡಳಿತ ಸಿಬ್ಬಂದಿ ಕಾರ್ಯಾಚರಣೆಗೆ ನಡೆಸಿದ್ದಾರೆ. ಸದ್ಯ ರಸ್ತೆ ದುರಸ್ತಿ ಮಾಡಲಾಗಿದೆ ಎಂದು ಯುಪಿಇಡಿಎ ಎಂಜಿನಿಯರ್ ತಿಳಿಸಿದ್ದಾಗಿ ವರದಿ ಉಲ್ಲೇಖಿಸಿದೆ. ಜುಲೈ 16 ರಂದು ಪ್ರಧಾನಿ ಮೋದಿ ಜಲೌನ್‌ನಿಂದ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಿದ ಬಳಿಕ ಸಂಚಾರ ಆರಂಭಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News