ಜಹಾಂಗೀರಪುರಿ ಹಿಂಸಾಚಾರಕ್ಕೆ ಸಂಬಂಧಿಸಿ 5 ಮಹಿಳೆಯರನ್ನು ಅಕ್ರಮ ದಿಗ್ಬಂಧನದಲ್ಲಿರಿಸಿದ ಪೊಲೀಸರು: ಆರೋಪ

Update: 2022-07-23 10:52 GMT

 ಹೊಸದಿಲ್ಲಿ: ತಮ್ಮನ್ನು ದಿಲ್ಲಿ ಪೊಲೀಸರು 42 ಗಂಟೆಗಳ ಕಾಲ ಆಕ್ರಮವಾಗಿ ವಶಪಡಿಸಿಕೊಂಡಿದ್ದರು ಎಂದು ಐದು ಮಂದಿ ಮುಸ್ಲಿಂ ಮಹಿಳೆಯರು ಆರೋಪಿಸಿದ್ದಾರೆ. ಆದರೆ ರಾಜಧಾನಿಯ ಜಹಾಂಗೀರಪುರಿ ಪ್ರದೇಶದಲ್ಲಿ ಈ ವರ್ಷದ ಎಪ್ರಿಲ್ 16ರಂದು ನಡೆದ ಮತೀಯ ಹಿಂಸಾಚಾರ ಪ್ರಕರಣ ಸಂಬಂಧ ಅವರನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ತಮ್ಮ ಮನೆಯ ಪುರುಷರು ಪೊಲೀಸರಿಗೆ ಶರಣಾಗುವಂತೆ ಮಾಡುವಂತೆ ತಮಗೆ ಬೆದರಿಕೆಗಳು ಬರುತ್ತಿವೆ ಎಂದು ಆ ಪ್ರದೇಶದ ಕೆಲ ಮಹಿಳೆಯರು ಹೇಳಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ. ಒಂದು ನಿರ್ದಿಷ್ಟ ಮಹಿಳೆಯ ಪುತ್ರ ಈ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಎಂಬ ಶಂಕೆ ಪೊಲೀಸರಿಗಿದೆ ಎಂದು ಆ ಮಹಿಳೆಯ ಕುಟುಂಬ ಹೇಳಿದೆ.

ಜುಲೈ 17ರಂದು ಈ ಮಹಿಳೆಯ ಮನೆಗೆ ರಾತ್ರಿ 9 ಗಂಟೆ ಸುಮಾರಿಗೆ ಬಂದ ಪೊಲೀಸರು ಆಕೆಯ ಪುತ್ರನ ಬಗ್ಗೆ ವಿಚಾರಿಸಿದ್ದರು, ತಿಳಿದಿಲ್ಲ ಎಂದಾಗ ಮಹಿಳೆ ಮತ್ತಾಕೆಯ ಪುತ್ರಿಯನ್ನು ಪೊಲೀಸ್ ವಾಹನದಲ್ಲಿ ಕುಳಿತುಕೊಳ್ಳುವಂತೆ ಹೇಳಲಾಯಿತು. 

ಇಬ್ಬರನ್ನೂ ನಂತರ ಜಹಾಂಗೀರಪುರಿ ಠಾಣೆಗೆ ಕರೆದೊಯ್ಯಲಾಯಿತು, ಪುತ್ರಿಗೆ 17 ವರ್ಷ, ಆಕೆ ಅಪ್ರಾಪ್ತೆ ಎಂದು ಹೇಳಿದರೂ ಪೊಲೀಸರು ಕಿವಿಗೆ ಹಾಕಿಸಿಕೊಳ್ಳಲಿಲ್ಲ ಎಂದು ಆರೋಪಿಸಲಾಗಿದೆ. ನಂತರ ಅವರ ಮೂವರು ಸಂಬಂಧಿ ಮಹಿಳೆಯರು ಠಾಣೆಗೆ ಹೋದಾಗ ಅವರನ್ನೂ ವಶಪಡಿಸಿಕೊಳ್ಳಲಾಯಿತು ಹಾಗೂ ಅವರಲ್ಲಿ 4 ವರ್ಷದ ಬಾಲಕಿಯೂ ಸೇರಿದ್ದಳು. 

ನಮ್ಮನ್ನು ಒಂದು ಕೊಠಡಿಯಲ್ಲಿ ಮೂರು ದಿನಗಳ ಕಾಲ ಕೂರಿಸಲಾಯಿತು ಎಂದು ಮಹಿಳೆಯರು ಹೇಳಿದ್ದಾರೆ. ಅವರಲ್ಲೊಬ್ಬಾಕೆ ತಮ್ಮ ಬಳಿಯಿದ್ದ ಫೋನ್‍ನಿಂದ ವಕೀಲರಿಗೆ ಕರೆ ಮಾಡಿದ ನಂತರ ಅವರು ಠಾಣೆಗೆ ಬಂದ ನಂತರವಷ್ಟೇ ಅವರನ್ನು ಬಿಡುಗಡೆಗೊಳಿಸಲಾಯಿತು. ಪೊಲೀಸರು ತಮ್ಮನ್ನು ನಿಂದಿಸಿದ್ದಾರೆಂದೂ ಮಹಿಳೆಯರು ಆರೋಪಿಸಿದ್ದಾರೆ.

ಪೊಲೀಸರು ಅಕ್ರಮವಾಗಿ ತಮ್ಮನ್ನು ದಿಗ್ಬಂಧನದಲ್ಲಿರಿಸಿದ್ದರು ಈ ಕುರಿತು ತನಿಖೆ ನಡೆಸಬೇಕೆಂದು ಕೋರಿ ಕುಟುಂಬ ಈಗ ದಿಲ್ಲಿ ಹೈಕೋರ್ಟಿನ ಕದ ತಟ್ಟಿದೆ. ಅಕ್ರಮವಾಗಿ ದಿಗ್ಬಂಧನದಲ್ಲಿರಿಸಿದ್ದಕ್ಕಾಗಿ ಪರಿಹಾರ ನೀಡಬೇಕೆಂದೂ ಮಹಿಳೆಯರು ಕೋರಿದ್ದಾರೆ. ಪ್ರಕರಣ ಮುಂದಿನ ವಾರ ವಿಚಾರಣೆಗೆ ಬರುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News