ನನ್ನ ಕೋಚ್‌ಗಳಿಗೆ ನಿರಂತರ ಕಿರುಕುಳ,ಇದರಿಂದ ನನ್ನ ತರಬೇತಿಗೆ ಧಕ್ಕೆಯಾಗಿದೆ: ಬೊರ್ಗೊಹೈನ್ ಆರೋಪ
ಬರ್ಮಿಂಗ್‌ಹ್ಯಾಮ್, ಜು.25: ನನ್ನ ಕೋಚ್‌ಗಳು ಅಧಿಕಾರಿಗಳಿಂದ ಎದುರಿಸುತ್ತಿರುವ ‘ನಿರಂತರ ಕಿರುಕುಳ’ದಿಂದಾಗಿ ನನ್ನ ಕಾಮನ್‌ವೆಲ್ತ್ ಗೇಮ್ಸ್ ತಯಾರಿಗೆ ಧಕ್ಕೆಯಾಗುತ್ತಿದೆ ಎಂದು ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಸೋಮವಾರ ಆರೋಪಿಸಿದ್ದಾರೆ.
ಭಾರತೀಯ ಬಾಕ್ಸಿಂಗ್ ತಂಡವು ಐರ್‌ಲ್ಯಾಂಡ್‌ನಲ್ಲಿ ತರಬೇತಿ ಪಡೆದ ನಂತರ ರವಿವಾರ ರಾತ್ರಿ ಗೇಮ್ಸ್ ವಿಲೇಜ್ ತಲುಪಿದೆ. ಆದರೆ, ಲವ್ಲಿನಾ ಅವರ ವೈಯಕ್ತಿಕ ಕೋಚ್ ಸಂಧ್ಯಾ ಗುರುಂಗ್ ಅವರು ಮಾನ್ಯತೆ ಪತ್ರ ಹೊಂದಿಲ್ಲದ ಕಾರಣ ಅವರಿಗೆ ಗೇಮ್ಸ್ ವಿಲೇಜ್‌ನೊಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.
ಕಾಮನ್‌ವೆಲ್ತ್ ವೇಳೆ ತನ್ನ ವೈಯಕ್ತಿಕ ತರಬೇತುದಾರ ಅಮೆಯ್ ಕೋಲೆಕರ್ ತನ್ನೊಂದಿಗೆ ಇರಬೇಕೆಂದು ಲವ್ಲಿನಾ ಬಯಸಿದ್ದರು. ಆದರೆ ಅವರು ಕೋಚ್‌ಗಳ ಪಟ್ಟಿಯಲ್ಲಿರಲಿಲ್ಲ. ಈ ಕುರಿತು ಲವ್ಲಿನಾ ಟ್ವಿಟರ್ ಪೋಸ್ಟ್‌ನಲ್ಲಿ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
‘‘ಇಂದು ಬಹಳಷ್ಟು ದುಃಖದಿಂದ ನನಗಾಗುತ್ತಿರುವ ನಿರಂತರ ಕಿರುಕುಳದ ಕುರಿತು ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ. ನನಗೆ ಒಲಿಂಪಿಕ್ಸ್ ಪದಕ ಗೆಲ್ಲಲು ಸಹಾಯ ಮಾಡಿದ್ದ ತರಬೇತುದಾರರನ್ನು ಯಾವಾಗಲೂ ಕಡೆಗಣಿಸಲಾಗುತ್ತಿದೆ. ಇದು ನನ್ನ ತರಬೇತಿಯ ಮೇಲೆ ತೀವ್ರ ಪರಿಣಾಮಬೀರಿದೆ. ಕೋಚ್‌ಗಳ ಪೈಕಿ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತೆ ಸಂಧ್ಯಾ ಗುರುಂಗ್ ಕೂಡ ಒಬ್ಬರು. ನನ್ನ ತಂಡಕ್ಕೆ ನನ್ನ ಕೋಚ್ ಅನ್ನು ಸೇರಿಸಲು ಕೈ ಮುಗಿದು ಮನವಿ ಮಾಡಬೇಕಾಯಿತು. ಈ ಅಗ್ನಿಪರೀಕ್ಷೆಯಿಂದ ಮಾನಸಿಕವಾಗಿ ಕಿರುಕುಳ ಅನುಭವಿಸುತ್ತಿದ್ದೇನೆ’’ ಎಂದು ಟ್ವಿಟರ್ ಪೋಸ್ಟ್‌ನಲ್ಲಿ ಲವ್ಲಿನಾ ಬರೆದಿದ್ದಾರೆ.
‘‘ಸದ್ಯ ನನ್ನ ಕೋಚ್ ಸಂಧ್ಯಾ ಗುರುಂಗ್ ಕಾಮನ್‌ವೆಲ್ತ್ ಗೇಮ್ಸ್ ಗ್ರಾಮದ ಹೊರಗೆ ನಿಂತಿದ್ದಾರೆ. ಪ್ರವೇಶಿಸಲು ಅನುಮತಿ ನೀಡಲಾಗುತ್ತಿಲ್ಲ.ಇದರಿಂದ ನನ್ನ ಸ್ಪರ್ಧೆ ಆರಂಭವಾಗುವ ಕೇವಲ 8 ದಿನಗಳ ಮೊದಲು ತರಬೇತಿ ವೇಳಾಪಟ್ಟಿಗೆ ಧಕ್ಕೆಯಾಗಿದೆ. ನನ್ನ ಇತರ ಕೋಚ್ ಅನ್ನು ಭಾರತಕ್ಕೆ ಕಳುಹಿಸಲಾಗಿದೆ’’ಎಂದು ಹೇಳಿದರು.
‘‘ಇದೇ ರೀತಿಯ ಪರಿಸ್ಥಿತಿಯನ್ನು ಇಸ್ತಾಂಬುಲ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ಗಿಂತ ಮೊದಲು ಅನುಭವಿಸಿದ್ದೇನೆ. ಮುಂಬರುವ ಬರ್ಮಿಂಗ್‌ಹ್ಯಾಮ್ ಗೇಮ್ಸ್‌ನಲ್ಲಿ ಇದೇ ರೀತಿ ಏನಾದರೂ ಆಗಬಹುದೆಂಬ ಭಯ ನನ್ನನ್ನು ಕಾಡುತ್ತಿದೆ. ಈ ಎಲ್ಲದರ ನಡುವೆ ಗೇಮ್ಸ್‌ನತ್ತ ಹೇಗೆ ಗಮನಹರಿಸಬೇಕೆಂದು ನನಗೆ ಗೊತ್ತಾಗುತ್ತಿಲ್ಲ. ಈ ರೀತಿಯ ಸಮಸ್ಯೆಯಿಂದಾಗಿ ನನ್ನ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಹಿನ್ನಡೆಯಾಗಿತ್ತು. ರಾಜಕೀಯದಿಂದಾಗಿ ನನ್ನ ಕಾಮನ್‌ವೆಲ್ತ್ ಮೇಲೆ ಪರಿಣಾಮ ಬೀರುವುದು ನನಗೆ ಇಷ್ಟವಿಲ್ಲ. ನಾನು ಈ ರಾಜಕೀಯವನ್ನು ಜಯಿಸಿ ನನ್ನ ದೇಶಕ್ಕಾಗಿ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದೇನೆ, ಜೈ ಹಿಂದ್’’ಎಂದು ಲವ್ಲಿನಾ ಟ್ವೀಟಿಸಿದ್ದಾರೆ.