×
Ad

ಎಎಪಿಯ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಒಂದು ವಾರ ಅಮಾನತು

Update: 2022-07-27 12:40 IST
Photo:twitter

ಹೊಸದಿಲ್ಲಿ: ಸದನದಲ್ಲಿ ಅಶಿಸ್ತಿನ ವರ್ತನೆಗಾಗಿ ಆಮ್ ಆದ್ಮಿ ಪಕ್ಷದ(ಎಎಪಿ) ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರನ್ನು ಒಂದು ವಾರ ಅಮಾನತುಗೊಳಿಸುವ ನಿರ್ಣಯವನ್ನು ರಾಜ್ಯಸಭೆ ಬುಧವಾರ ಅಂಗೀಕರಿಸಿದೆ ಎಂದು NDTV ವರದಿ ಮಾಡಿದೆ.

ಸದನದಲ್ಲಿ ಅಶಿಸ್ತಿನ ವರ್ತನೆಗಾಗಿ ಟಿಎಂಸಿಯ ಏಳು, ಡಿಎಂಕೆಯ ಆರು ಮಂದಿ, ಟಿಆರ್‌ಎಸ್, ಸಿಪಿಎಂ ಹಾಗೂ ಸಿಪಿಐ ಸೇರಿದಂತೆ ವಿರೋಧ ಪಕ್ಷಗಳ 19 ಸಂಸದರನ್ನು ಅಮಾನತುಗೊಳಿಸಿದ ಒಂದು ದಿನದ ನಂತರ ಸಂಜಯ್ ಅವರನ್ನೂ  ಅಮಾನತು ಮಾಡಲಾಗಿದೆ.

ಪ್ರಶ್ನೋತ್ತರ ಅವಧಿಗೆ ಮಧ್ಯಾಹ್ನ 12 ಗಂಟೆಗೆ ಸದನದ ಕಲಾಪ ಆರಂಭವಾದ ಕೂಡಲೇ, ಉಪ ಸಭಾಪತಿ ಹರಿವಂಶ್ ಅವರು ನಿಯಮ 256 ಅನ್ನು ಅನ್ವಯಿಸಿದರು ಹಾಗೂ  ಮಂಗಳವಾರ ಕಾಗದಗಳನ್ನು ಹರಿದು ಕುರ್ಚಿಯ ಮೇಲೆ ಎಸೆದಿದ್ದಕ್ಕಾಗಿ ಸಿಂಗ್ ಅವರನ್ನು ಹೆಸರಿಸಿದರು.

ಸಿಂಗ್ ಅವರ ಕ್ರಮವು ನಿಯಮಗಳು ಮತ್ತು ಅಧ್ಯಕ್ಷರ ಅಧಿಕಾರವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಉಪಸಭಾಪತಿ ಹೇಳಿದರು.

ಇದಾದ ಕೆಲವೇ ಹೊತ್ತಿನಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಅವರು ಸಂಜಯ್  ಸಿಂಗ್ ಅವರನ್ನು ವಾರದ ಉಳಿದ ಅವಧಿಗೆ ಸದನದಿಂದ ಅಮಾನತುಗೊಳಿಸುವ ಪ್ರಸ್ತಾಪವನ್ನು ಮಂಡಿಸಿದರು.

ಪ್ರತಿಪಕ್ಷದ ಸದಸ್ಯರು ಸದನದ ಬಾವಿಯಲ್ಲಿ ಗದ್ದಲ ಎಬ್ಬಿಸುತ್ತಲೇ ಇದ್ದಾಗಲೇ  ಧ್ವನಿ ಮತದ ಮೂಲಕ ಪ್ರಸ್ತಾವನೆ ಅಂಗೀಕರಿಸಲಾಯಿತು.

ಪ್ರಸ್ತಾವನೆಯನ್ನು ಅಂಗೀಕರಿಸಿದ ಕೂಡಲೇ ಸದನದಿಂದ ನಿರ್ಗಮಿಸುವಂತೆ ಉಪಸಭಾಪತಿ ಅವರು ಸಿಂಗ್ ಅವರನ್ನು ಕೇಳಿದರು.

ಪ್ರತಿಪಕ್ಷಗಳ ಸದಸ್ಯರು ಗದ್ದಲ ಮುಂದುವರಿಸಿದ ಹಿನ್ನೆಲೆಯಲ್ಲಿ ಉಪಸಭಾಪತಿಯವರು ಸದನವನ್ನು 15 ನಿಮಿಷಗಳ ಕಾಲ ಮುಂದೂಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News