ಕಷ್ಟಪಟ್ಟು ತಯಾರಿಸಿದ ವರದಿಯನ್ನು ಪ್ರಕಟಿಸಲು ನಿರಾಕರಿಸಿದಾಗ ಪತ್ರಕರ್ತರ ಆತ್ಮಸ್ಥೈರ್ಯ ಕುಂದುತ್ತದೆ: ಜಸ್ಟಿಸ್ ರಮಣ

Update: 2022-07-27 09:42 GMT

ಹೊಸದಿಲ್ಲಿ: ಪತ್ರಕರ್ತರು ಕಷ್ಟ ಪಟ್ಟು ಸಿದ್ಧಪಡಿಸಿದ ವರದಿಯನ್ನು ಅವರು ಕೆಲಸ ಮಾಡುವ ಮಾಧ್ಯಮ ಸಂಸ್ಥೆ ಪ್ರಕಟಿಸಲು ನಿರಾಕರಿಸಿದಾಗ ಅವರ ಆತ್ಮಸ್ಥೈರ್ಯ ಕುಂದುವುದರ ಜೊತೆಗೆ ಅವರು ತಮ್ಮ ವೃತ್ತಿಯ ಮೇಲಿನ ನಂಬಿಕೆಯನ್ನೂ ಕಳೆದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದ್ದಾರೆ.

ಕಾನೂನು ವೃತ್ತಿಗೆ ಪ್ರವೇಶಿಸುವುದಕ್ಕಿಂತ ಮೊದಲು ಅಲ್ಪ ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ಜಸ್ಟಿಸ್ ರಮಣ ಅವರು ಗುಲಾಬ್ ಕೊಠಾರಿ ಅವರು ಬರೆದಿರುವ `ಗೀತಾ ವಿಗ್ಯಾನ್ ಉಪನಿಷದ್' ಎಂಬ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

"ಹಲವಾರು ಬಾರಿ ಪತ್ರಕರ್ತನೊಬ್ಬ ಬಹಳ ಕಷ್ಟಪಟ್ಟು, ಅಪಾಯಗಳನ್ನು ಎದುರಿಸಿ  ಸಿದ್ಧಪಡಿಸಿದ ಉತ್ತಮ ವರದಿಯನ್ನು `ಡೆಸ್ಕ್ ನಲ್ಲಿಯೇ ಸಾಯಿಸಲಾಗುತ್ತದೆ" ಎಂದು ಅವರು ಹೇಳಿದರು. ಇಂತಹ ಪರಿಸ್ಥಿತಿ ಆಗಾಗ ಎದುರಾದಾಗ ಆಕೆ ಅಥವಾ ಆತ ವೃತ್ತಿಯ ಮೇಲೆ ನಂಬಿಕೆ ಕಳೆದುಕೊಂಡರೆ ಅವರನ್ನು ದೂಷಿಸುವಂತಿಲ್ಲ ಎಂದು ಅವರು ಹೇಳಿದರು.

"ವಾಸ್ತವವನ್ನು ಜನರ ಮುಂದಿಡುವುದು ಮಾಧ್ಯಮ ಸಂಸ್ಥೆಗಳ ಕರ್ತವ್ಯ.  ಪ್ರಾಮಾಣಿಕ ಪತ್ರಿಕೋದ್ಯಮ ನಡೆಸಬೇಕೇ ವಿನಹ ಮಾಧ್ಯಮವನ್ನು ಪ್ರಭಾವವನ್ನು ವಿಸ್ತರಿಸಲು ಹಾಗೂ ಇತರ ವ್ಯವಹಾರ ಆಸಕ್ತಿಗಳನ್ನು ಉತ್ತೇಜಿಸಲು ಬಳಸಬಾರದು" ಎಂದು ಅವರು ಹೇಳಿದರು.

"ಪುಲಿಟ್ಝರ್‍ಗೆ ಸಮಾನವಾದ ಪ್ರಶಸ್ತಿ ನಮ್ಮಲ್ಲಿ ಇನ್ನೂ ಇಲ್ಲ  ಹಾಗೂ ಈ ಪ್ರಶಸ್ತಿಗೆ ಅರ್ಹತೆ ಪಡೆಯುವಂತಹ ಹಲವು ಪತ್ರಕರ್ತರೂ ಇಲ್ಲಿ ತಯಾರಾಗುತ್ತಿಲ್ಲ. ನಮ್ಮ  ಗುಣಮಟ್ಟ ಅಂತರಾಷ್ಟ್ರೀಯ ಮಾನ್ಯತೆ ಮತ್ತು ಪ್ರಶಸ್ತಿಗೆ ಏಕೆ ಇನ್ನೂ ಪರಿಗಣಿತವಾಗುತ್ತಿಲ್ಲ ಎಂಬುದರ ಅವಲೋಕನ ನಡೆಸಬೇಕು" ಎಂದು ಜಸ್ಟಿಸ್ ರಮಣ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News