ದೇವ ದುರ್ಲಭರು...ದುರ್ಬಲರಾದಾಗ...

Update: 2022-08-01 18:48 GMT

ಭಾರತೀಯ ರಾಜಕೀಯದ ಆಗುಹೋಗುಗಳಲ್ಲಿ 'ಕಾರ್ಯಕರ್ತ' ಎಂಬ ವ್ಯವಸ್ಥೆಗೆ ಭಾರೀ ಮಹತ್ವವಿದೆ. ಜಾಗತಿಕವಾಗಿ ರಾಜಕೀಯ ವ್ಯವಸ್ಥೆಯೊಳಗೆ ಆಯಾ ಪ್ರಾದೇಶಿಕ ಪದ್ಧತಿಯಂತೆ ಅನುಯಾಯಿಗಳು ಹಿಂಬಾಲಕರು...ಇದ್ದರೂ, ಈ 'ಕಾರ್ಯಕರ್ತ' ಎಂಬ ಒಂದು ರಾಜಕೀಯ ಪಕ್ಷಗಳೇ ಹುಟ್ಟು ಹಾಕಿ ಬೆಳೆಸಿದ ಮತ್ತು ಸಾಕಷ್ಟು ಬಳಸಿದ ಈ ನಮೂನೆಗೆ ಬಹುಶಃ ಭಾರತಕ್ಕೆ ಭಾರತವೇ ಸಾಟಿ ಎನ್ನಬಹುದು.

ಬಹಳ ವಿಶಾಲ ಮತ್ತು ದೊಡ್ಡ ಜನಸಂಖ್ಯೆಯ ನಮ್ಮಲ್ಲಿ ತೀರಾ ಇತ್ತೀಚಿನ ಸಂಪರ್ಕ ಕ್ರಾಂತಿಯ ತನಕ ದೇಶದ ಉದ್ದಗಲಕ್ಕೂ ಒಂದು ಸಿದ್ಧಾಂತವನ್ನು ಜನಮಾನಸಕ್ಕೆ ತಲುಪಿಸುವುದು ಒಂದು ಸವಾಲೇ ಆಗಿತ್ತು. (ಅದನ್ನು ಮೀರಿಯೂ ಮಹಾತ್ಮಾ ಗಾಂಧೀಜಿಯವರು ಈ ದೇಶದ ಯಾವ ಮೂಲೆಯನ್ನೂ ಬಿಡದೆ ಸ್ವಾತಂತ್ರ್ಯ ಹೋರಾಟ ರೂಪಿಸಿದ್ದು, ಇಂದಿರಾ ಗಾಂಧಿಯವರು ತಮ್ಮ ಸಾಧನೆಗಳ ಮೂಲಕ ಮನೆಮಾತಾಗಿದ್ದು ಒಂದು ಜಾಗತಿಕ ಅದ್ಭುತ) ಕಾಲಾನುಸಾರದ ಬದಲಾವಣೆ ಮತ್ತು ಮಾಧ್ಯಮ ಕ್ರಾಂತಿ ಇವುಗಳನ್ನು ಸಾಕಷ್ಟು ಬದಲಾಯಿಸಿದರೂ, ಚುನಾವಣಾ ಸಂದರ್ಭದ ಅಗತ್ಯಗಳನ್ನು ಪೂರೈಸುವಲ್ಲಿ ಮತ್ತು ಆನಂತರ ಅದು ಆಡಳಿತವೇ ಆಗಿರಲಿ ಅಥವಾ ವಿರೋಧ ಪಕ್ಷಗಳೇ ಇರಲಿ ಆಯಾ ಪಕ್ಷಗಳ ಮಾನಸಿಕತೆಯನ್ನು ಸಮಾಜದಲ್ಲಿ ಉಳಿಸಿ ಬೆಳೆಸುವಲ್ಲಿ ಈ 'ಕಾರ್ಯಕರ್ತ' ಎಂಬ ಹುದ್ದೆ, ಪಕ್ಷ ಮತ್ತು ಕಾರ್ಯಕರ್ತರ ನಡುವೆ ಬಹಳ ಅಗತ್ಯ ಮತ್ತು ಆಕರ್ಷಕವಾಯಿತು.
ಬಹಳ ದೀರ್ಘಕಾಲ ದೇಶದ ಮತ್ತು ಬಹುತೇಕ ಎಲ್ಲ ರಾಜ್ಯಗಳ ಆಡಳಿತ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಪಕ್ಷ ನಿಜಕ್ಕೂ ಈ ಕಾರ್ಯಕರ್ತರಿಗೊಂದು ಸಾಮಾಜಿಕ ಸ್ಥಾನಮಾನದ ಸಾಧ್ಯತೆಯನ್ನು ಮೊದಲಾಗಿ ತೆರೆದಿಟ್ಟದ್ದು, ಅದು ಪಾವತಿಯ ವಿಧಾನದಲ್ಲ್ಲಾದರೂ ಸೈ! ಮತ್ತು ಈ ಮೂಲಕವೇ ಕಾರ್ಯಕರ್ತರ ಪಡೆಗೆ ರಾಜಕೀಯ ಲಾಭದ ರುಚಿ ಹತ್ತಿದ್ದು ಹೌದು. ಅದೆಷ್ಟರ ಮಟ್ಟಿಗೆ ನಾವು ಬಯಸಿದರೂ ರಾಜಕೀಯ ಭ್ರಷ್ಟಾಚಾರ ಬಿಟ್ಟು ಹೋಗದ ವ್ಯವಸ್ಥೆಯೊಳಗೆ ಅದೇ ಸರಣಿಯ ಕೊನೆಯಲ್ಲಿರುವ ಕಾರ್ಯಕರ್ತರಿಗೂ ತಮ್ಮ ಅಗತ್ಯತೆಯ ಪರಿಯನ್ನು ಉಪಯೋಗಿಸುವುದನ್ನು ಕಲಿಸಿ.
ಯಾವಾಗ ದೇಶದಲ್ಲಿ ಕಾಂಗ್ರೆಸ್ ಜತೆಗೆ ಬಿಜೆಪಿ ಮತ್ತು ಇತರ ರಾಜಕೀಯ ಪಕ್ಷಗಳ ಗಾಳಿ ಹೆಚ್ಚಾಗಲು ಆರಂಭವಾಯಿತೋ ಅಂದಿನಿಂದ ಈ ಕಾರ್ಯಕರ್ತರಿಗೂ ತಮ್ಮ ತಮ್ಮ ಅವಕಾಶಗಳ ಬಾಗಿಲು ಹೆಚ್ಚಾಗಿ ರಾಜಕೀಯ ಒಲವು ಮತ್ತು ಸಿದ್ಧಾಂತಗಳಿಗಿಂತ ಹೆಚ್ಚು ಹಣ, ಅಧಿಕಾರ ಮತ್ತು ಅನೈತಿಕ ಮಾರ್ಗಗಳು ಉದಯವಾದದ್ದು. ಇದು ಮುಂದುವರಿದು ರಾಜಕೀಯ ನಾಯಕರ ಭ್ರಷ್ಟ ವ್ಯವಸ್ಥೆಯ ರಕ್ಷಣೆ ಮತ್ತು ನೇರ ಪಾಲ್ಗೊಳ್ಳುವಿಕೆಗೆ ಇದೇ ಕಾರ್ಯಕರ್ತರು ಕೈಹಾಕಿದ್ದು. ಒಂದೆಡೆ ದೇವ ದುರ್ಲಭ ಕಾರ್ಯಕರ್ತರು ತಮಗಿದ್ದಾರೆಂಬ ಪ್ರಚಾರದೊಂದಿಗೆ ಕಾರ್ಯಕರ್ತರ ಮತಿಭ್ರಮಣೆ ಮಾಡಿ, ಮತೀಯ ದ್ವೇಷ ಬೆಳೆಸಿ ತಮ್ಮ ತಮ್ಮ ಪಟ್ಟವನ್ನು ಸದಾ ಗಟ್ಟಿಗೊಳಿಸುತ್ತಾ.
ಸಾಮಾಜಿಕ ವ್ಯವಸ್ಥೆಯ ಎಲ್ಲಾ ಲೋಪದೋಷಗಳನ್ನು ಸಮರ್ಥವಾಗಿ ಬಳಸುವ ಈ ರಾಜಕೀಯ ಪಕ್ಷಗಳು ಕಾರ್ಯಕರ್ತರ ವಿಷಯದಲ್ಲೂ ಇದೇ ಚಾಳಿಯನ್ನೂ ಮುಂದುವರಿಸಿ...ಸಮಾಜದ ತಳವರ್ಗದವರನ್ನೇ ಕಾರ್ಯಕರ್ತರನ್ನಾಗಿಸಿ ಕಾಲಕಾಲಕ್ಕೂ ಅವರ ತನು,ಮನ,ಧನದ ಪ್ರಾಮಾಣಿಕ ಸೇವೆ ಪಡೆದು ಅಗತ್ಯ ಬಿದ್ದರೆ ಅವರ ಬಲಿ ಪಡೆಯಲು ಸಿದ್ಧ ಎಂಬ ಸ್ಪಷ್ಟ ಚಿತ್ರಣವಂತೂ ಇದೀಗ ಜನರೆದುರು ಜಗಜ್ಜಾಹೀರಾಗಿದೆ ಪ್ರಸ್ತುತ ಆಡಳಿತ ವ್ಯವಸ್ಥೆಯೆದುರು. ಈ ಎಚ್ಚರಿಕೆಯಿಂದಾದರೂ ಮುಂದೆ ಯಾವುದೇ ಪಕ್ಷದ ಕಾರ್ಯಕರ್ತರು ದುರ್ಬಲರಾಗದೆ ತಮ್ಮ ತಮ್ಮ ವೈಯಕ್ತಿಕ ಜೀವನದಲ್ಲಿ ಸೋಲಿಗೆ ಗುರಿಯಾಗದಿರಲಿ ಎಂಬ ನಿಲುವು ಮೂಡಲಿ.

Similar News