ಮನ್‍ರೇಗಾ ಅಡಿ ಉದ್ಯೋಗಕ್ಕೆ ಹೆಚ್ಚಿದ ಬೇಡಿಕೆ: ಸಂಸತ್ತಿಗೆ ಸಚಿವರ ಮಾಹಿತಿ

Update: 2022-08-03 11:19 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಥವಾ ಮನ್‍ರೇಗಾ ಯೋಜನೆಯಡಿ ಕೆಲಸಕ್ಕೆ ಬೇಡಿಕೆಯಿರಿಸಿದ ಕುಟುಂಬಗಳ ಸಂಖ್ಯೆ 2015ರಲ್ಲಿ 1.64 ಕೋಟಿಯಾಗಿದ್ದರೆ 2022 ರಲ್ಲಿ ಈ ಸಂಖ್ಯೆ 3.07 ಕೋಟಿಗೆ ಏರಿಕೆಯಾಗಿದೆ ಎಂದು ಕೇಂದ್ರ ಸರಕಾರ ಮಂಗಳವಾರ ಸಂಸತ್ತಿಗೆ ತಿಳಿಸಿದೆ.

ಕಾಂಗ್ರೆಸ್ ಸಂಸದ ಸುರೇಶ್ ಧನೋರ್ಕರ್ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡುವ ವೇಳೆ ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ನಿರಂಜನ್ ಜ್ಯೋತಿ ಮೇಲಿನಂತೆ ಹೇಳಿದ್ದಾರೆ.

ಈ ಯೋಜನೆಯಡಿ ಮೇ 2019ರಲ್ಲಿ 2.48 ಕೋಟಿ ಮಂದಿ ಉದ್ಯೋಗಕ್ಕೆ ಬೇಡಿಕೆ  ಸಲ್ಲಿಸಿದ್ದರೆ ಈ ಸಂಖ್ಯೆ ಮೊದಲ ಕೋವಿಡ್ ಲಾಕ್‍ಡೌನ್ ಜಾರಿಗೊಳಿಸಲಾಗಿದ್ದ ಮೇ 2020ರಲ್ಲಿ 3.73 ಕೋಟಿಗೆ ಏರಿಕೆಯಾಗಿತ್ತು. ಮೇ 2021ರಲ್ಲಿ ಈ ಯೋಜನೆಯಡಿ ಉದ್ಯೋಗಕ್ಕೆ ಬೇಡಿಕೆ 2.66 ಕೋಟಿಗೆ ಕುಸಿದಿದ್ದರೆ ಮೇ 2022ರಲ್ಲಿ ಮತ್ತೆ 3.07 ಕೋಟಿಗೆ ಏರಿಕೆಯಾಗಿದೆ.

ಮೇ ತಿಂಗಳಿನಲ್ಲಿ ಕೃಷಿ ಚಟುವಟಿಕೆಗಳು ಕಡಿಮೆಯಿರುವುದರಿಂದ ಸರಿಸುಮಾರು ಎಲ್ಲಾ ರಾಜ್ಯಗಳಲ್ಲಿ ಮನ್‍ರೇಗಾ ಅಡಿಯಲ್ಲಿ ಉದ್ಯೋಗಕ್ಕೆ ಬೇಡಿಕೆ ಹೆಚ್ಚಾಗಿದೆ.

ಇದೇ ಯೋಜನೆ ಕುರಿತಂತೆ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಯೋಜನೆಗೆ 2014-15ರಲ್ಲಿ ಬಿಡುಗಡೆಗೊಳಿಸಲಾದ ಅನುದಾನ ರೂ 32,977.43 ಕೋಟಿ ಆಗಿದ್ದರೆ 2020-21ರಲ್ಲಿ ರೂ 98,467.85 ಕೋಟಿ ಬಿಡುಗಡೆಯಾಗಿದೆ.

ಆರ್ಥಿಕ ವರ್ಷ 2022-23ರಲ್ಲಿ ಜುಲೈ 27ರ ತನಕ ಯೋಜನೆಯಡಿ ರೂ 36,677.79 ಕೋಟಿ ಬಿಡುಗಡೆಯಾಗಿದೆ. ಗರಿಷ್ಠ ಮೊತ್ತ ರೂ 1,11,170.86 ಕೋಟಿ 2020-21 ರಲ್ಲಿ ಕೋವಿಡ್  ನಿರ್ಬಂಧಗಳ ಸಂದರ್ಭ ಬಿಡುಗಡೆಗೊಂಡಿತ್ತು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News