ಕಲೆಕ್ಟರ್ ಆಗಲು ಯೋಗ್ಯರಲ್ಲ: ಮಧ್ಯಪ್ರದೇಶ ಐಎಎಸ್ ಅಧಿಕಾರಿ ವಿರುದ್ಧ ಕಿಡಿಕಾರಿದ ನ್ಯಾಯಾಧೀಶ

Update: 2022-08-04 09:49 GMT

ಭೋಪಾಳ್: ಪಂಚಾಯತ್ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯೊಬ್ಬರನ್ನು ವಿಜಯಿ ಎಂದು ಘೋಷಿಸಿದ ಹಿರಿಯ ಐಎಎಸ್ ಅಧಿಕಾರಿ ಪನ್ನಾ ಜಿಲ್ಲಾ ಕಲೆಕ್ಟರ್ ಸಂಜಯ್ ಮಿಶ್ರಾ ಅವರನ್ನು ತರಾಟೆಗೆ ತೆಗೆದುಕೊಂಡ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶ ವಿವೇಕ್ ಅಗ್ರವಾಲ್ "ಆತ ರಾಜಕೀಯ ಏಜಂಟ್ ರೀತಿ ವರ್ತಿಸಿದ್ದಾರೆ. ಅವರು ಕಲೆಕ್ಟರ್ ಹುದ್ದೆಗೆ ಯೋಗ್ಯರಲ್ಲ, ಅವರನ್ನು ಹುದ್ದೆಯಿಂದ ಕಿತ್ತೊಗೆಯಬೇಕು,'' ಎಂದು ಹೇಳಿದ್ದಾರೆ.

ರಾಜ್ಯದ ಗುನ್ನೋರ್ ಜನಪದ್ ಪಂಚಾಯತ್ ಉಪಾಧ್ಯಕ್ಷ ಚುನಾವಣೆ ಕಳೆದ ತಿಂಗಳು ನಡೆದಾಗ ವಿಜೇತರನ್ನು ತಪ್ಪಾಗಿ ಘೋಷಿಸಿರುವುದರ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಧೀಶರು ಮೇಲಿನಂತೆ ಹೇಳಿದರು.

ಅಧಿಕಾರಿಗೆ ನೈಸರ್ಗಿಕ ನ್ಯಾಯ ತತ್ವಗಳ ಮೇಲೆ ನಂಬಿಕೆಯಿಲ್ಲ, ಆದುದರಿಂದ  ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಎಂದು ನ್ಯಾಯಾಧೀಶರು ಹೇಳಿದರು.

ಜುಲೈ 27ರಂದು ಗುನ್ನೋರ್ ಜನಪದ್ ಪಂಚಾಯತ್ ಚುನಾವಣೆ ನಡೆದಿತ್ತು. ಉಪಾಧ್ಯಕ್ಷ ಹುದ್ದೆಯ ಸ್ಪರ್ಧೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರಮಾನಂದ್ ಶರ್ಮ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ರಾಮ್‍ಶಿರೋಮಣಿ ಮಿಶ್ರಾ ಅವರನ್ನು ಸೋಲಿಸಿದ್ದರು. ಶರ್ಮ ಅವರಿಗೆ 25 ಮತಗಳಲ್ಲಿ 13 ಮತಗಳು ದೊರಕಿದ್ದವು. ಚುನಾವಣಾಧಿಕಾರಿ ವಿಜೇತ ಅಭ್ಯರ್ಥಿ ಶರ್ಮ ಅವರಿಗೆ ಪ್ರಮಾಣಪತ್ರ ಕೂಡ ನೀಡಿದ್ದರು. ಆದರೆ ಅದೇ ದಿನ ಸೋತ ಅಭ್ಯರ್ಥಿ ಮಿಶ್ರಾ ಅವರು ಪನ್ನಾ ಜಿಲ್ಲಾ ಕಲೆಕ್ಟರ್ ಅವರಿಗೆ ಚುನಾವಣೆ ಫಲಿತಾಂಶ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.

ಇದರ ಆಧಾರದಲ್ಲಿ ಹಾಗೂ ವಿಜೇತ ಅಭ್ಯರ್ಥಿ ಶರ್ಮ ಅವರನ್ನು ಪ್ರಶ್ನಿಸದೆಯೇ ಕಲೆಕ್ಟರ್ ಅವರು  ಚುನಾವಣಾ ಫಲಿತಾಂಶ ರದ್ದುಗೊಳಿಸಿ ಆದೇಶ ಹೊರಡಿಸಿ ಮರುದಿನ ಹೊಸದಾಗಿ ಚುನಾವಣೆಯನ್ನು ಲಾಟರಿ ಸಿಸ್ಟಂ ಆಧಾರದಲ್ಲಿ ನಡೆಸಿ ರಾಮಶಿರೋಮಣಿ ಮಿಶ್ರಾ ಅವರನ್ನು ವಿಜೇತರೆಂದು ಘೋಷಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News