×
Ad

ಆ.7ರಿಂದ ‘ಅಗ್ನಿಪಥ್’ ಯೋಜನೆ ವಿರುದ್ಧ ಅಭಿಯಾನ: ಬಿಕೆಯು ನಾಯಕ ರಾಕೇಶ್ ಟಿಕಾಯತ್

Update: 2022-08-04 21:00 IST
Rakesh Tikait (Photo | PTI)

ನೊಯ್ಡ,ಆ.4: ಕೇಂದ್ರದ ನೂತನ ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ ಅನ್ನು ವಿರೋಧಿಸಿ ತನ್ನ ರೈತ ಸಂಘಟನೆಯು ಆ.7ರಿಂದ ಅಭಿಯಾನವನ್ನು ಆರಂಭಿಸಲಿದೆ ಎಂದು ಭಾರತೀಯ ಕಿಸಾನ ಯೂನಿಯನ್ (ಬಿಕೆಯು) ನಾಯಕ ರಾಕೇಶ ಟಿಕಾಯತ್ ಅವರು ಪ್ರಕಟಿಸಿದ್ದಾರೆ.

ಬುಧವಾರ ಉತ್ತರಪ್ರದೇಶದ ಬಾಘಪತ್ ಜಿಲ್ಲೆಯ ಟಿಕ್ರಿಯಲ್ಲಿ ರೈತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಟಿಕಾಯತ್,ಅಗ್ನಿಪಥ್ ವಿರುದ್ಧ ಅಭಿಯಾನವು ಆ.7ರಿಂದ ಆರಂಭಗೊಳ್ಳುತ್ತದೆ ಮತ್ತು ಒಂದು ವಾರದವರೆಗೆ ಮುಂದುವರಿಯಲಿದೆ ಎಂದು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಬೃಹತ್ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ರೈತರನ್ನು ಬೆದರಿಸಲು ಅವರ ವಿರುದ್ಧದ ಹಳೆಯ ಪೊಲೀಸ್ ಪ್ರಕರಣಗಳನ್ನು ಕೆದಕಲಾಗುತ್ತಿದೆ ಎಂದು ಆರೋಪಿಸಿದ ಅವರು,ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರ ರಚನೆಯಾದಾಗ ಪಕ್ಷದ ಕಾರ್ಯಕರ್ತರ ವಿರುದ್ಧ ಪ್ರಕರಣಗಳನ್ನು ಹಿಂದೆಗೆದುಕೊಳ್ಳಲಾಗಿತ್ತು. ಹೀಗಾಗಿ ರೈತರ ವಿರುದ್ಧದ ಪ್ರಕರಣಗಳನ್ನು ಹಿಂದೆಗೆದುಕೊಳ್ಳಲು ಅವರು ಸಿದ್ಧರಾಗಬೇಕು, ಇಲ್ಲದಿದ್ದರೆ ಆಂದೋಲನಕ್ಕೆ ನಾವು ತಯಾರಿದ್ದೇವೆ. ಲಕ್ನೋ ಮತ್ತು ದಿಲ್ಲಿಯಲ್ಲಿ ಇರುವವರು ಇದನ್ನು ಎಚ್ಚರಿಕೆಯಿಂದ ಆಲಿಸಬೇಕು. ನೀವು ರಾಜಕೀಯ ಪಕ್ಷಗಳನ್ನು ಒಡೆಯಬಹುದು,ನೀವು ರೈತ ಸಂಘಟನೆಗಳ ನಾಯಕರನ್ನು ಬೇರೆಯಾಗಿಸಬಹುದು. ಆದರೆ ನೀವು ರೈತರನ್ನು ಒಡೆಯಲು ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ರೈತರು ಪ್ರತಿಭಟಿಸಲಿದ್ದಾರೆ ಎಂದರು.

ಇತರ ವಿಷಯಗಳ ಜೊತೆಗೆ ಭೂಸ್ವಾಧೀನ,ವಿದ್ಯುತ್ ಶುಲ್ಕ ಮತ್ತು ಬಾಕಿಯುಳಿದಿರುವ ಕಬ್ಬಿನ ಬಾಕಿಗಳನ್ನು ಟಿಕಾಯತ್ ಪ್ರಮುಖವಾಗಿ ಬಿಂಬಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News