ಭಾರತದಲ್ಲಿ ಪ್ರಜಾಪ್ರಭುತ್ವವು ಉಸಿರಾಡಲು ಕಷ್ಟಪಡುತ್ತಿದೆ: ಚಿದಂಬರಂ
ಹೊಸದಿಲ್ಲಿ: ಸಂಸತ್ತು "ನಿಷ್ಕ್ರಿಯ"ವಾಗಿದೆ ಎಂಬ ತೀರ್ಮಾನಕ್ಕೆ ನಾನು ತಲುಪಿರುವೆ ಹಾಗೂ ಬಹುತೇಕ ಎಲ್ಲಾ ಸಂಸ್ಥೆಗಳನ್ನು ಪಳಗಿಸಿ, ಭ್ರಷ್ಟಗೊಳಿಸಲಾಗಿದೆ ಅಥವಾ ವಶಪಡಿಸಿಕೊಂಡಿದ್ದಾರೆ. ಹೀಗಾಗಿ ಭಾರತದಲ್ಲಿ ಪ್ರಜಾಪ್ರಭುತ್ವವು(democracy) ಉಸಿರಾಡಲು ಕಷ್ಟಪಡುತ್ತಿದೆ" ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ (Chidambaram) ಆರೋಪಿಸಿದರು.
ಕಳೆದ ವಾರ ಸಂಸತ್ ಅಧಿವೇಶನ ನಡೆಯುತ್ತಿದ್ದಾಗ ಜಾರಿ ನಿರ್ದೇಶನಾಲಯ (ಈಡಿ) ನಿಂದ ವಿಚಾರಣೆಗೆ ಸಮನ್ಸ್ ಸ್ವೀಕರಿಸಿದ್ದ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಕ್ಷಿಸಲು ರಾಜ್ಯಸಭಾ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು "ವಿಫಲರಾಗಿದ್ದಾರೆ" ಎಂದು ಚಿದಂಬರಂ ಹೇಳಿದರು.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಶುಕ್ರವಾರದ ಬೆಲೆ ಏರಿಕೆ ವಿರುದ್ಧದ ಕಾಂಗ್ರೆಸ್ ಪ್ರತಿಭಟನೆಗೆ ರಾಮ ಮಂದಿರದ ಪ್ರತಿಷ್ಠಾಪನಾ ದಿನಕ್ಕೆ ನಂಟು ಬೆಸೆದಿರುವ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಚಿದಂಬರಂ ತಳ್ಳಿಹಾಕಿದರು,
ಉಪರಾಷ್ಟ್ರಪತಿ ಚುನಾವಣೆಗೆ ಶನಿವಾರ ಮತದಾನ ನಡೆಯುವುದರಿಂದ ಎಲ್ಲ ಸಂಸದರು ಶುಕ್ರವಾರ ದಿಲ್ಲಿಯಲ್ಲಿರುತ್ತಾರೆ ಎಂದು ಗಣನೆಗೆ ತೆಗೆದುಕೊಂಡು ಪ್ರತಿಭಟನೆ ನಿಗದಿಪಡಿಸಲಾಗಿದೆ, ಯಾರನ್ನಾದರೂ ದೂಷಿಸಲು ಒಬ್ಬರು ಯಾವಾಗಲೂ ತರ್ಕವನ್ನು ತಿರುಚಬಹುದು ಎಂದು ಹೇಳಿದರು.