ಮುನ್ನೆಚ್ಚರಿಕೆ ಡೋಸ್ ಆಗಿ ಕೋರ್ಬ್‌ವ್ಯಾಕ್ಸ್: ಕೇಂದ್ರ ಅನುಮೋದನೆ

Update: 2022-08-10 18:19 GMT

ಹೊಸದಿಲ್ಲಿ, ಆ. 10: ಸಿರಂ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಅಥವಾ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್‌ನಲ್ಲಿ ಯಾವುದಾದರೂ ಒಂದು ಲಸಿಕೆಯ ಪೂರ್ಣ ಡೋಸ್‌ಗಳನ್ನು ಪಡೆದುಕೊಂಡ ಹಾಗೂ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್ ಆಗಿ ಹೈದರಾಬಾದ್ ಮೂಲದ ಔಷಧ ಉತ್ಪಾದಕ ಕಂಪೆನಿ ಬಯಾಲಾಜಿಕಲ್ ಇಯ ಕೋರ್ಬ್‌ವ್ಯಾಕ್ಸ್ ಲಸಿಕೆ ನೀಡಲು ಕೇಂದ್ರ ಸರಕಾರ ಬುಧವಾರ ಅನುಮತಿ ನೀಡಿದೆ. 

ಇದುವರೆಗೆ ಭಾರತದಲ್ಲಿ ಕೋವಿಡ್ ವಿರುದ್ಧದ ಮೂರನೇ ಲಸಿಕೆಯನ್ನು ಮೊದಲನೆ ಹಾಗೂ ಎರಡನೇ ಡೋಸ್‌ನಲ್ಲಿ ನೀಡಲಾಗಿದ್ದ ಲಸಿಕೆಯನ್ನೇ ನೀಡಲಾಗುತ್ತಿತ್ತು. ಮುನ್ನೆಚ್ಚರಿಕೆ ಡೋಸ್ ಆಗಿ ಕೋರ್ಬ್‌ವ್ಯಾಕ್ಸ್ ಲಸಿಕೆಯನ್ನು ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಯುನೈಸೇಷನ್ ಪರಿಶೀಲನೆ ನಡೆಸಿದೆ ಹಾಗೂ ಜುಲೈಯಲ್ಲಿ ಶಿಫಾರಸು ಮಾಡಿದೆ ಎಂದು ಬಯಾಲಾಜಿಕಲ್ ಇಯ ಉಪಾಧ್ಯಕ್ಷ ಡಾ. ವಿಕ್ರಮ್ ಪರಾಡ್ಕರ್‌ಅವರು ಹೇಳಿದ್ದಾರೆ. 

2021 ಡಿಸೆಂಬರ್‌ನಿಂದ ಈ ವರ್ಷ ಜೂನ್ ನಡುವೆ ಕೋರ್ಬ್‌ವ್ಯಾಕ್ಸ್ ಅನೇಕ ಅನುಮತಿಗಳನ್ನು ಪಡೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ. ಬೂಸ್ಟರ್ ಡೋಸ್ ಆಗಿ ಕೋರ್ಬ್‌ವ್ಯಾಕ್ಸ್‌ಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಜೂನ್‌ನಲ್ಲಿ ಅನುಮೋದನೆ ನೀಡಿತ್ತು. ಬಯಾಲಾಜಿಕಲ್ ಇಯ ಈ ಲಸಿಕೆಯ ಪರಿಶೀಲನೆಗೆ ಅನಂತರ ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಯುನೈಸೇಷನ್‌ಗೆ ಕಳುಹಿಸಿ ಕೊಡಲಾಗಿತ್ತು. 18 ಹಾಗೂ 80ರ ನಡುವಿನ ಪ್ರಾಯದ 416 ಸ್ವಯಂ ಸೇವಕರು ಒಳಗೊಂಡ ಕ್ಲಿನಿಕಲ್ ಟ್ರಯಲ್ ಅನ್ನು ಕಂಪೆನಿ ಆಯೋಜಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News