ಶಿಸ್ತು ಉಲ್ಲಂಘಿಸಿದ ಆರೋಪ: ಬಿಜೆಪಿ ಮಧುರೈ ಅಧ್ಯಕ್ಷ ಸರವಣನ್ ಪಕ್ಷದಿಂದ ಉಚ್ಚಾಟನೆ

Update: 2022-08-14 06:54 GMT
Photo:twitter

ಚೆನ್ನೈ: ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರ ವಾಹನದ ಮೇಲೆ ಬಿಜೆಪಿ ಕಾರ್ಯಕರ್ತರು ಚಪ್ಪಲಿ ಎಸೆದ ಒಂದು ದಿನದ ನಂತರ ರವಿವಾರ ಬಿಜೆಪಿ ಮಧುರೈ ಜಿಲ್ಲಾಧ್ಯಕ್ಷ ಪಿ.  ಸರವಣನ್ (BJP Madurai prez p. Saravanan)ಅವರನ್ನು ಪಕ್ಷದಿಂದ  ಉಚ್ಚಾಟಿಸಲಾಗಿದೆ.

ನಾನು ವಿತ್ತ ಸಚಿವರನ್ನು ಭೇಟಿ ಮಾಡಿ ಘಟನೆಗೆ ಕ್ಷಮೆಯಾಚಿಸಿರುವುದಾಗಿ ಸರವಣನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

‘ಪಕ್ಷದ ಶಿಸ್ತು ಉಲ್ಲಂಘಿಸಿ ಪಕ್ಷದ ಹೆಸರಿಗೆ ಕಳಂಕ ತಂದ ಕಾರಣಕ್ಕಾಗಿ ಬಿಜೆಪಿ ಮಧುರೈ ಜಿಲ್ಲಾಧ್ಯಕ್ಷ ಸರವಣನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ’ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ.

ಪಳನಿವೇಲ್ ತ್ಯಾಗ ರಾಜನ್ ಅವರು ಶನಿವಾರ ಮಧುರೈ ಜಿಲ್ಲೆಯಲ್ಲಿ ಹುತಾತ್ಮ ಭಾರತೀಯ ಸೇನಾ ಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸಿ ಹಿಂದಿರುಗುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ಅವರ ಕಾರನ್ನು ತಡೆದು, ಘೋಷಣೆಗಳನ್ನು ಕೂಗಿದರು ಹಾಗೂ  ಅವರ ವಾಹನಕ್ಕೆ ಚಪ್ಪಲಿ ಎಸೆದಿದ್ದರು. ಹುತಾತ್ಮ ಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸಲು ಆಯೋಜಿಸಿದ್ದ ಸರಕಾರಿ ಕಾರ್ಯಕ್ರಮಕ್ಕೆ ಪಕ್ಷದವರು ಏಕೆ ಬಂದಿದ್ದರು ಎಂದು ಪ್ರಶ್ನಿಸಿದ ಸಚಿವರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿತ್ತು.

‘ಬಿಜೆಪಿ ಹುದ್ದೆಗಿಂತ ಮನಃಶಾಂತಿ ಮುಖ್ಯ’ ಎಂದಿರುವ ಸರವಣನ್ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸೇರುವ ಬಗ್ಗೆ ತಾನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಪಕ್ಷಕ್ಕೆ ಸೇರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಹೇಳಿದರು.

2021ರಲ್ಲಿ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯಿಂದ  ತನ್ನನ್ನು ಕೈಬಿಡಲ್ಪಟ್ಟ ನಂತರ ಸರವಣನ್ ಅವರು ಡಿಎಂಕೆ ತ್ಯಜಿಸಿ ಬಿಜೆಪಿಗೆ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News