ಕೇರಳದ ಪಾಲಕ್ಕಾಡ್‍ನಲ್ಲಿ ಸಿಪಿಐ(ಎಂ) ನಾಯಕನ ಬರ್ಬರ ಹತ್ಯೆ: ಹಲವರ ಬಂಧನ

Update: 2022-08-16 08:52 GMT

ಪಾಲಕ್ಕಾಡ್: ಕೇರಳದ ಪಾಲಕ್ಕಾಡ್‍ನಲ್ಲಿ ಆಗಸ್ಟ್ 14 ರ ರಾತ್ರಿ ಸಿಪಿಐ(ಎಂ) ನಾಯಕ ಕೆ ಶಾಜಹಾನ್ (SHAJAHAN) ಎಂಬವರನ್ನು ಆರು ಮಂದಿ ದುಷ್ಕರ್ಮಿಗಳ ತಂಡವೊಂದು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದೆ. 

ಘಟನೆ ರಾತ್ರಿ ಸುಮಾರು 9.30ಕ್ಕೆ ನಡೆದಿದೆ. ಕೊಟ್ಟೆಕಾಡ್ ಎಂಬಲ್ಲಿ ಹರಿತವಾದ ಆಯುಧಗಳಿಂದ ದುಷ್ಕರ್ಮಿಗಳು 40 ವರ್ಷದ ಶಾಜಹಾನ್ ಅವರನ್ನು ಅಡ್ಡಗಟ್ಟಿ ಕೊಚ್ಚಿ ಕೊಂದಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಶಾಜಹಾನ್ ಅವರು ಸ್ಥಳೀಯ ಸಿಪಿಐ(ಎಂ) (CPI (M) ಸಮಿತಿ ಸದಸ್ಯರಾಗಿದ್ದರು.

ಈ ಹತ್ಯೆ ಖಂಡಿಸಿ ಸಿಪಿಐ(ಎಂ) ಮರುತ ರೋಡ್ ಪಂಚಾಯತ್‍ನಲ್ಲಿ ಹರತಾಳಕ್ಕೆ ಕರೆ ನೀಡಿತ್ತು. ಈ ಹತ್ಯೆಗೆ ಆರೆಸ್ಸೆಸ್(RSS) ಮತ್ತು ಬಿಜೆಪಿಯೊಂದಿಗೆ  ನಂಟು ಹೊಂದಿದವರು ಕಾರಣ ಎಂದು ಸಿಪಿಐ(ಎಂ) ಆರೋಪಿಸಿದರೆ, ಹತ್ಯೆಗೆ ಸಿಪಿಐ(ಎಂ) ಪಕ್ಷವನ್ನೇ ಕೇಸರಿ ಸಂಘಟನೆಗಳು ದೂರಿವೆ.

ದುಷ್ಕರ್ಮಿಗಳು ಟಾರ್ಗೆಟ್ ಮಾಡಿದ ಪ್ರತ್ಯಕ್ಷದರ್ಶಿ ಸಾಕ್ಷಿಯೊಬ್ಬರ ಪುತ್ರ ಕೂಡ ಹತ್ಯೆಗೈದ ತಂಡದಲ್ಲಿದ್ದ ಆರು ಮಂದಿಯಲ್ಲಿ ಒಬ್ಬನಾಗಿದ್ದ ಎಂದು ವರದಿ ಹೇಳಿದೆ. ಆದರೆ ಪ್ರತ್ಯಕ್ಷದರ್ಶಿ ಸಾಕ್ಷಿಯ ಪುತ್ರ ತಡೆದ ನಂತರ ದಾಳಿ ನಡೆಸಲಾಗಿಲ್ಲ.

ಹಂತಕರ ಮಾಹಿತಿ ದೊರಕಿದೆ ಎಂದು ಪಾಲಕ್ಕಾಡ್(PALAKKAD) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ವಿಶ್ವನಾಥ್ ಹೇಳಿದ್ದಾರೆ. ಘಟನೆಯ ಪ್ರತ್ಯಕ್ಷದರ್ಶಿ ಸಾಕ್ಷಿ ಸೋಮವಾರ ಆರಂಭದಲ್ಲಿ ಈ ಹತ್ಯೆಗೆ ಸಿಪಿಐ(ಎಂ) ಸದಸ್ಯರು ಕಾರಣ ಎಂದು ಹೇಳಿಕೊಂಡರೆ ನಂತರ ತನ್ನ ಹೇಳಿಕೆ ಬದಲಾಯಿಸಿ ಅವರು ಆರೆಸ್ಸೆಸ್ ಕಾರ್ಯಕರ್ತರು ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಈ ಹತ್ಯೆಯಲ್ಲಿ ತನ್ನ ಪಾತ್ರವನ್ನು ಮರೆಮಾಚಲು ಸಿಪಿಐ(ಎಂ) ಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ದಾಳಿ ನಡೆದ ಸಂದರ್ಭ ಪ್ರತ್ಯಕ್ಷದರ್ಶಿ ಸಾಕ್ಷಿಯು ಹತ್ಯೆಯಾದ ಶಾಜಹಾನ್ ಜೊತಗಿದ್ದರು. ದಾಳಿಕೋರರು ಹಾಗೂ ಶಾಜಹಾನ್ ನಡುವೆ ವ್ಯಾಗ್ಯುದ್ಧ ನಡೆದ ನಂತರ ಆತನನ್ನು ಹತ್ಯೆಗೈಯ್ಯಲಾಯಿತು ಎಂದು ಸಾಕ್ಷಿ ಹೇಳಿದ್ದಾರೆ.

ದುಷ್ಕರ್ಮಿಗಳು ತಮ್ಮಿಬ್ಬರಿಗಾಗಿ ಪಾಲಕ್ಕಾಡಿನ ಮರುತ ರಸ್ತೆಯಲ್ಲಿ ಕಾದಿದ್ದರು. ಹಾಗೂ ದಾಳಿಕೋರರಲ್ಲಿ ಒಬ್ಬಾತ ತನ್ನ ಪುತ್ರನಾಗಿದ್ದರಿಂದ ತನ್ನನ್ನು ಹತ್ಯೆಗೈಯ್ಯದೆ ಬಿಟ್ಟುಬಿಡಲಾಯಿತು ಎಂದು ಪ್ರತ್ಯಕ್ಷದರ್ಶಿ ಸಾಕ್ಷಿ ಆರಂಭದಲ್ಲಿ ಹೇಳಿದ್ದರು. ನಂತರ ಹೇಳಿಕೆ ಬದಲಾಯಿಸಿದ ಆತ ಎಲ್ಲಾ ದಾಳಿಕೋರರು ಆರೆಸ್ಸೆಸ್ ಕಾರ್ಯಕರ್ತರು, ಅವರಲ್ಲಿ ಇಬ್ಬರು ಈ ಹಿಂದೆ ಸಿಪಿಐ(ಎಂ) ಸದಸ್ಯರಾಗಿದ್ದರು ಈಗ ಆರೆಸ್ಸೆಸ್ ಜೊತೆಗಿದ್ದಾರೆ ಎಂದು ಹೇಳಿದ್ದಾರೆ.

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಇ ಎನ್ ಸುರೇಶ್ ಬಾಬು ಕೂಡ ಪ್ರತಿಕ್ರಿಯಿಸಿ ದುಷ್ಕರ್ಮಿಗಳು ಹಿಂದೆ ತಮ್ಮ ಪಕ್ಷದ ಸದಸ್ಯರಾಗಿದ್ದರೂ ಕಳೆದೊಂದು ವರ್ಷದಿಂದ ಆರೆಸ್ಸೆಸ್ ಭಾಗವಾಗಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News