ಶಾಂತಿ ಮತ್ತು ನಿರ್ಭಯವಾಗಿ ಬದುಕುವ ನನ್ನ ಹಕ್ಕನ್ನು ಕೊಡಿಸಿ: ಸರ್ಕಾರಕ್ಕೆ ಬಿಲ್ಕಿಸ್‌ ಬಾನು ಆಗ್ರಹ

Update: 2022-08-17 18:05 GMT

ಅಹಮದಾಬಾದ್:‌ ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ 11 ಮಂದಿ ಜೈಲಿನಿಂದ ಬಿಡುಗಡೆಯಾದ ಒಂದು ದಿನದ ನಂತರ, ಬಿಲ್ಕಿಸ್ ಬಾನು ಶಾಂತಿಯಿಂದ ಮತ್ತು ಭಯವಿಲ್ಲದೆ ಬದುಕುವ ತಮ್ಮ ಹಕ್ಕಿಗಾಗಿ ಒತ್ತಾಯಿಸಿದ್ದಾರೆ.

"ಇಂತಹ ದೊಡ್ಡ ಮತ್ತು ಅನ್ಯಾಯದ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನನ್ನ ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ಯಾರೂ ವಿಚಾರಿಸಲಿಲ್ಲ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ, ಅಲ್ಲದೆ, ಜೀವಾವಧಿ ಶಿಕ್ಷೆಗೆ ಒಳಗಾದ 11 ಜನರನ್ನು ಬಿಡುಗಡೆ ಮಾಡುವ ನಿರ್ಧಾರದಿಂದ ಉಂಟಾದ ಹಾನಿಯನ್ನು ರದ್ದುಗೊಳಿಸುವಂತೆ ಗುಜರಾತ್ ಸರ್ಕಾರವನ್ನು ಅವರು ಆಗ್ರಹಿಸಿದ್ದಾರೆ.

ಮಾರ್ಚ್ 3, 2002 ರಂದು ಗುಜರಾತ್‌ನಲ್ಲಿ ನಡೆದ ಗಲಭೆಯಲ್ಲಿ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತು. ಆ ಸಮಯದಲ್ಲಿ 19 ವರ್ಷ ವಯಸ್ಸಿನವರಾಗಿದ್ದ ಆಕೆ ಗರ್ಭಿಣಿಯಾಗಿದ್ದಳು. ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಆಕೆಯ ಕುಟುಂಬದ ಹದಿನಾಲ್ಕು ಸದಸ್ಯರನ್ನು ಅಹಮದಾಬಾದ್ ಬಳಿ ಗಲಭೆಕೋರರು ಹತ್ಯೆ ಮಾಡಿದ್ದರು.

ಅಪರಾಧಿಗಳನ್ನು ಸೋಮವಾರ ಗೋಧ್ರಾ ಜೈಲಿನಿಂದ ಬಿಡುಗಡೆ ಮಾಡಲಾಗಿದ್ದು, ಗುಜರಾತ್ ಸರ್ಕಾರವು ತನ್ನ ಉಪಶಮನ ನೀತಿಯ ಅಡಿಯಲ್ಲಿ ಶಿಕ್ಷೆಯನ್ನು ಕಡಿಮೆ ಮಾಡಲು ಅವರ ಅರ್ಜಿಯನ್ನು ಅನುಮೋದಿಸಿತ್ತು.

ತನ್ನ ವಕೀಲೆ ಶೋಭಾ ಗುಪ್ತಾ ಮೂಲಕ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಭಾರತೀಯ ಜನತಾ ಪಕ್ಷದ ಸರ್ಕಾರದ ನಿರ್ಧಾರವು ತನ್ನನ್ನು ಆಘಾತಕ್ಕೆ ತಳ್ಳಿದೆ, ಮತ್ತು ನನ್ನ ಬಳಿ ಮಾತನಾಡಲು ಪದಗಳು ಇಲ್ಲ ಎಂದು ಬಾನು ಬುಧವಾರ ಹೇಳಿದ್ದಾರೆ.

"ಇಂದು, ನಾನು ಇದನ್ನು ಮಾತ್ರ ಹೇಳಬಲ್ಲೆ - ಯಾವುದೇ ಮಹಿಳೆಗೆ ನ್ಯಾಯವು ಈ ರೀತಿ ಕೊನೆಗೊಳ್ಳುವುದು ಹೇಗೆ?...ಈ ಅಪರಾಧಿಗಳ ಬಿಡುಗಡೆಯು ನನ್ನಿಂದ ನನ್ನ ಶಾಂತಿಯನ್ನು ತೆಗೆದುಕೊಂಡಿತು ಮತ್ತು ನ್ಯಾಯದಲ್ಲಿ ನನ್ನ ನಂಬಿಕೆಯನ್ನು ಅಲ್ಲಾಡಿಸಿದೆ. ನನ್ನ ದುಃಖ ಮತ್ತು ನನ್ನ ಅಲುಗಾಡುವ ನಂಬಿಕೆ ನನಗೊಬ್ಬರಿಗೆ ಮಾತ್ರವಲ್ಲ, ನ್ಯಾಯಾಲಯಗಳಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವ ಪ್ರತಿಯೊಬ್ಬ ಮಹಿಳೆಗೆ ಬಾಧಕವಾಗುತ್ತದೆ” ಎಂದು ಹೇಳಿದ್ದಾರೆ.

ಬಿಜೆಪಿ ಸರ್ಕಾರ ಈ ನಿರ್ಧಾರ ಕೈಗೊಳ್ಳಲು ಕಾರಣವಾದ ಮನಸ್ಥಿತಿಯನ್ನು ಪ್ರತಿಪಕ್ಷಗಳು ಪ್ರಶ್ನಿಸಿವೆ. ಈ ವಿಷಯದಲ್ಲಿ ಗುಜರಾತ್ ಸರ್ಕಾರದ ನಿಲುವನ್ನು ರದ್ದುಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News