×
Ad

ಸ್ಥಳೀಯ-ಜಾಗತಿಕ ಸಾಂಸ್ಕೃತಿಕ ಬಂಧ ವಿವಿಗಳ ಗಟ್ಟಿ ತಳಹದಿಗೆ ಅಗತ್ಯ: ಡಾ.ರಂಜನ್ ಪೈ

Update: 2022-08-19 19:39 IST

ಮಣಿಪಾಲ : ಸ್ಥಳೀಯ ಮತ್ತು ಜಾಗತಿಕ ಸಂಸ್ಕೃತಿಗಳ ನಡುವೆ ಸಂಬಂಧ ನಿರ್ಮಿಸುವ ಮೂಲಕ ಉನ್ನತ ಶಿಕ್ಷಣ ತನ್ನ ಸಾರ್ಥಕತೆಯನ್ನು ಕಂಡುಕೊಳ್ಳುತ್ತದೆ. ಮಾಹೆಯೂ ಇದೇ ನಿಟ್ಟಿನಲ್ಲಿ ಸತತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎದ್ಯುಕೇಷನ್‌ನ (ಮಾಹೆ) ಅಧ್ಯಕ್ಷ ಹಾಗೂ ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಬಳಗದ ಸಂಸ್ಥೆಗಳ (ಎಂಇಎಂಜಿ) ಅಧ್ಯಕ್ಷ ಡಾ.ರಂಜನ್ ಪೈ  ಹೇಳಿದ್ದಾರೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ಸೆಂಟರ್ ಫಾರ್ ಇಂಡರ್‌ಕಲ್ಚರಲ್ ಸ್ಟಡೀಸ್ ಆ್ಯಂಡ್ ಡಯಲಾಗ್ (ಸಿಎಸ್‌ಐಡಿ) ಘಟಕದ ವತಿಯಿಂದ ಪ್ರಾರಂಭಿಸಲಾಗಿರುವ ‘ಡಿಸರ್ನಿಂಗ್ ಇಂಡಿಯ: ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು’ ಎಂಬ ಆನ್‌ಲೈನ್ ಕೋರ್ಸ್‌ಗೆ ಚಾಲನೆ ನೀಡಿ ಅವರು ಮಾತನಾಡುತಿದ್ದರು. 

ಉದ್ಘಾಟನೆಯ ಸಂದರ್ಭದಲ್ಲಿ ಆಯೋಜಿಸಲಾದ ತುಳುನಾಡಿನ ಹುಲಿವೇಷ ಕುಣಿತಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಮಾಹೆ ಸ್ಥಳೀಯ ಕಲಾ ಪ್ರಕಾರ, ಸಾಹಿತ್ಯ ಹಾಗೂ ಸಂಸ್ಕೃತಿಗಳೊಂದಿಗೆ ನಿಕಟ ಹಾಗೂ ಸೌಹಾರ್ದ ಸಂಬಂಧವನ್ನು ಹೊಂದಿದೆ. ಈ ಮೂಲಕ ಸ್ಥಳೀಯ ಸಮುದಾಯಗಳೊಂದಿಗೆ ಹೊಂದಿರಬೇಕಾದ ಬಾಂಧವ್ಯದ ಬಗ್ಗೆ ವಿದ್ಯಾಸಂಸ್ಥೆಗಳಿಗೆ ಹೊಸ ಮಾದರಿಯೊಂದನ್ನು ಹಾಕಿಕೊಟ್ಟಿದೆ ಎಂದರು.

ಮಾಹೆಯ ಕುಲಪತಿ ಲೆ.ಜ.ಡಾ.ಎಂ.ಡಿ.ವೆಂಕಟೇಶ್ ಮಾತನಾಡಿ, ಮಾಹೆ  ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)-೨೦೨೨ ಕುರಿತಂತೆ ಬದ್ಧತೆಯನ್ನು ಹೊಂದಿದೆ. ಇದರ ಒಂದು ಭಾಗವಾಗಿ ಸ್ಥಳೀಯ ಸಂಸ್ಕೃತಿಯನ್ನು ಕಲಿಸುವ ಆನ್‌ಲೈನ್ ಕೋರ್ಸ್‌ನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ಸ್ಥಳೀಯ ಸಂಸ್ಕೃತಿಯನ್ನು ಶಿಕ್ಷಣದ ಭಾಗವಾಗಿ ಸಮಗ್ರವಾಗಿ ಕಲಿಸಲಾಗುತ್ತದೆ. ಡಾಕ್ಯುಮೆಂಟರಿ,  ಉಪನ್ಯಾಸ ಹಾಗೂ ಪ್ರಾಯೋಗಿಕವಾಗಿ ಕಲಿಸುವ ಮೂಲಕ ತುಳುನಾಡಿನ ತತ್ವಗಳ ಬಗ್ಗೆ ಶೈಕ್ಷಣಿಕ ಸಂಶೋಧನೆಗೂ ಅವಕಾಶಗಳನ್ನು ಕಲ್ಪಿಸಲಾಗುವುದು ಎಂದರು.

ಮಾಹೆ ಈಗಾಗಲೇ ಪ್ರಾದೇಶಿಕ ಸಂಪನ್ಮೂಲ ಕೇಂದ್ರ (ಆರ್‌ಆರ್‌ಸಿ), ಯಕ್ಷಗಾನ ಕೇಂದ್ರ, ಧ್ವೈತ ಫಿಲಾಸಫಿ ರಿಸೋರ್ಸ್ ಸೆಂಟರ್, ಹೆಬ್ಬಾರ್ ಆರ್ಟ್ ಗ್ಯಾಲರಿಗಳನ್ನು ಹೊಂದಿದೆ.ಇದೀಗ ತುಳುನಾಡಿನ ಕಲೆ ಹಾಗೂ ಸಂಸ್ಕೃತಿಯ ಕುರಿತಂತೆ ಆನ್‌ಲೈನ್ ಕೋರ್ಸ್ ಪ್ರಾರಂಭಗೊಂಡಿದೆ ಎಂದು ಮಾಹೆ  ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ನುಡಿದರು.

ಇದೇ ಸಂದರ್ಭದಲ್ಲಿ ಉಡುಪಿ ಜಾನಪದ ಸಂಸ್ಕೃತಿ ಹಾಗೂ ಜನಪದ ಬದುಕಿನ ಸಂಭ್ರಮವನ್ನು ಪ್ರತಿನಿಧಿಸುವ ಕಲೆಯಾಗಿರುವ ‘ಹುಲಿವೇಷ’ ಕುಣಿತವನ್ನು ಉಡುಪಿಯ ಪ್ರಸಿದ್ಧ ಹುಲಿವೇಷ ತಂಡವಾಗಿರುವ ಅಶೋಕ್ ಕಾಡುಬೆಟ್ಟು ಬಳಗ ಪ್ರಸ್ತುತ ಪಡಿಸಿತು. ಕೋರ್ಸ್‌ನ ಸಂಯೋಜಕ ಡಾ.ಪ್ರವೀಣ್ ಶೆಟ್ಟಿ ಹೊಸ ಕೋರ್ಸ್ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News