ಉತ್ತರ ಪ್ರದೇಶ : ಫೀಸು ಕಟ್ಟದ ಬಾಲಕನನ್ನು ಥಳಿಸಿ ಕೊಂದ ಶಿಕ್ಷಕನ ಬಂಧನ

Update: 2022-08-19 17:19 GMT
Photo: Twitter/shravastipolice

ಲಕ್ನೋ: ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯ 3 ನೇ ತರಗತಿ ವಿದ್ಯಾರ್ಥಿಯು ತನ್ನ ಶಾಲಾ ಶಿಕ್ಷಕರಿಂದ ಹಲ್ಲೆಗೊಳಗಾದ ಒಂಬತ್ತು ದಿನಗಳ ನಂತರ ಬುಧವಾರ ಸಾವನ್ನಪ್ಪಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ರಿಜೇಶ್ ಪ್ರಸಾದ್ ಎಂಬ ವಿದ್ಯಾರ್ಥಿಯನ್ನು ಆತನ ಶಾಲೆಯ ಶಿಕ್ಷಕ ಅನುಪಮ್ ಪಾಠಕ್ ಅವರು ಆಗಸ್ಟ್ 8 ರಂದು ಥಳಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಕುಮಾರ್ ಮೌರ್ಯ ತಿಳಿಸಿದ್ದಾರೆ. 13 ವರ್ಷದ ಬಾಲಕ ಆಗಸ್ಟ್ 17 ರಂದು ಬಹ್ರೈಚ್ ಪಟ್ಟಣದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮಗುವಿನ ಚಿಕ್ಕಪ್ಪ ಶಿವಕುಮಾರ್ ಲಾಲ್ ದೂರು ದಾಖಲಿಸಿದ ನಂತರ, ಪೊಲೀಸರು ಆರೋಪಿ ಶಿಕ್ಷಕ ಪಾಠಕ್ ನನ್ನು ಆತನ ಮನೆಯಿಂದ ಶುಕ್ರವಾರ ಬಂಧಿಸಿದ್ದಾರೆ.

ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304, 323, 504 ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ.

250 ರೂಪಾಯಿ ಶುಲ್ಕ ಪಾವತಿಸಲು ಸಾಧ್ಯವಾಗದ ಕಾರಣ ಮಗುವನ್ನು ಕೊಲ್ಲಲಾಗಿದೆ ಎಂದು ಮಗುವಿನ ಸಂಬಂಧಿಯೊಬ್ಬರು ಹಂಚಿಕೊಂಡ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಿದಾಡುತ್ತಿದೆ.

ಗುರುವಾರ, ಮಗುವಿನ ಸಂಬಂಧಿಕರು ಮತ್ತು ಇತರ ನಿವಾಸಿಗಳು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದು, ಆ ಪ್ರದೇಶದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ  ಎಂದು ಅಮರ್ ಉಜಾಲಾ ವರದಿ ಮಾಡಿದ್ದಾರೆ. ನಂತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News