ಹಣ ನೀಡಿ ‘ನ್ಯೂಯಾರ್ಕ್ ಟೈಮ್ಸ್’ನಲ್ಲಿ ಲೇಖನ ಪ್ರಕಟ ಆರೋಪ: ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಆಮ್ ಆದ್ಮಿ ಪಕ್ಷ

Update: 2022-08-19 18:23 GMT

ಹೊಸದಿಲ್ಲಿ, ಆ. 19: ‘ನ್ಯೂಯಾರ್ಕ್ ಟೈಮ್ಸ್’ನಲ್ಲಿ ಪ್ರಕಟವಾಗಿರುವ ಮನೀಶ್ ಸಿಸೋಡಿಯ ಕುರಿತ ಲೇಖನ ಹಣ ಪಾವತಿಸಿದ ಸುದ್ದಿ ಎಂಬ ಬಿಜೆಪಿಯ ಆರೋಪವನ್ನು ಆಮ್ ಆದ್ಮಿ ಪಕ್ಷ (ಎಎಪಿ) ಶುಕ್ರವಾರ ತಳ್ಳಿ ಹಾಕಿದೆ.

‘‘ನಾನು ನಿಮಗೆ ಸವಾಲು ಹಾಕುತ್ತೇನೆ. ನಿಮ್ಮಲ್ಲಿರುವ ಹಣ, ನಿಮ್ಮಲ್ಲಿರುವ ಅಧಿಕಾರ ಬಳಸಿ ಸಾಧ್ಯವಿದ್ದರೆ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಲೇಖನ ಪ್ರಕಟಿಸಿ ’’ ಎಂದು ಎಎಪಿಯ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

‘‘ನ್ಯೂಯಾರ್ಕ್ ಟೈಮ್ಸ್’’ ಲೇಖನಕ್ಕೆ ಎಎಪಿ ಹಣ ಪಾವತಿಸಿದೆ ಎಂದು ಹಲವು ಬಿಜೆಪಿ ನಾಯಕರು ಟ್ವೀಟ್ ಮಾಡಿದ ಬಳಿಕ ಆಮ್ ಆದ್ಮಿ ಪಕ್ಷ ಈ ಪ್ರತಿಕ್ರಿಯೆ ನೀಡಿದೆ. ಟ್ವೀಟ್ ಮಾಡಿದ ಬಿಜೆಪಿ ನಾಯಕರಲ್ಲಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಕೂಡ ಸೇರಿದ್ದಾರೆ.
‘‘ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಸುದ್ದಿ ಪ್ರಕಟಿಸುವುದು ಸುಲಭವಲ್ಲ ಎಂದು ಅವರು (ಕೇಜ್ರಿವಾಲ್) ಒಪ್ಪಿಕೊಳ್ಳುತ್ತಾರೆ. ಜಾಹೀರಾತಿಗೆ ಸಾರ್ವಜನಿಕರ ಹಣವನ್ನು ನೀವು ಎಷ್ಟು ಕಾಲ ಬಳಸಲು ಸಾಧ್ಯ? ನೀವು ಮುಖ್ಯಮಂತ್ರಿಯೇ?  ಅಥವಾ ಮುಖ್ಯ ವ್ಯಾಪಾರಿಯೇ?’’ ಎಂದು ಲೇಖಿ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಎಎಪಿ ವರಿಷ್ಠ ಹಾಗೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತನ್ನ ವೀಡಿಯೊ ಹೇಳಿಕೆಯಲ್ಲಿ ನ್ಯೂಯಾರ್ಕ್ ಟೈಮ್ಸ್‌ನ ಲೇಖನವನ್ನು ಎತ್ತಿ ಹಿಡಿದಿದ್ದರು. ಶಿಕ್ಷಣ ಮಾದರಿಗಾಗಿ  ಮನೀಶ್ ಸಿಸೋಡಿಯ ಅವರ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅವರನ್ನು ಗುರಿಯಾಗಿರಿಸಿದೆ ಎಂದಿದ್ದಾರೆ.

‘‘ಅತಿ ದೊಡ್ಡ ಸುದ್ದಿಪತ್ರಿಕೆ ದಿಲ್ಲಿಯ ಶಿಕ್ಷಣ ಕ್ರಾಂತಿಯ ಬಗ್ಗೆ ಬರೆದಿದೆ.   ಹಾಗೂ ಸಿಸೋಡಿಯ ಅವರ ಭಾವಚಿತ್ರವನ್ನು ಪ್ರಕಟಿಸಿದೆ. ಕಳೆದ ವರ್ಷ ಕೋವಿಡ್ ಸಾವಿನ ಹಿನ್ನೆಲೆಯಲ್ಲಿ ಈ ಪತ್ರಿಕೆಯಲ್ಲಿ ಭಾರತದ ಹೆಸರು ಪ್ರಕಟವಾಗಿತ್ತು’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News