ಮನೀಶ್‌ ಸಿಸೋಡಿಯಾ ದಾಖಲೆ, ಇಲೆಕ್ಟ್ರಾನಿಕ್ಸ್ ಸಾಧನಗಳನ್ನು ವಶಪಡಿಸಿಕೊಂಡ ಸಿಬಿಐ

Update: 2022-08-19 18:29 GMT

ಹೊಸದಿಲ್ಲಿ, ಆ. 19: ದಿಲ್ಲಿ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ಶುಕ್ರವಾರ ದಾಳಿ ನಡೆಸಿದ ಸಂದರ್ಭ ಸಿಬಿಐ ದೋಷಾರೋಪಣೆಯ ದಾಖಲೆಗಳು, ಇಲೆಕ್ಟ್ರಾನಿಕ್ಸ್ ಸಾಧನಗಳನ್ನು ವಶಪಡಿಸಿಕೊಂಡಿದೆ.


ಸಾರ್ವಜನಿಕ ಸಾಕ್ಷಿಯ ಸಮ್ಮುಖದಲ್ಲಿ ಸಿಬಿಐ ಕೆಲವು ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದೆ. ಭವಿಷ್ಯದಲ್ಲಿ ಯಾವುದೇ ವಿವಾದ ಉಂಟಾಗದಂತೆ ಸಂಪೂರ್ಣ ಕಾನೂನು ಪ್ರಕ್ರಿಯೆಯೊಂದಿಗೆ ಇದನ್ನು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕ ಸಾಕ್ಷಿಗಳ ಸಮ್ಮುಖದಲ್ಲಿ ಮುಟ್ಟುಗೋಲು ಮೆಮೋವನ್ನು ನೀಡಲಾಗಿದೆ. ಮನೆಯಲ್ಲಿದ್ದ ವಿವಿಧ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಅಲ್ಲದೆ ಸಿಸೋಡಿಯ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದು ಯೋಜಿತ ದಾಳಿ: ರಾಘವ ಛಡ್ಡಾ

ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲಿನ ದಾಳಿಯಲ್ಲಿ ಸಿಬಿಐ ಪೆನ್ಸಿಲ್ ಹಾಗೂ ಜಾಮೆಟ್ರಿ ಬಾಕ್ಸ್ ಅನ್ನು ಮಾತ್ರ ಪತ್ತೆ ಮಾಡುತ್ತದೆ ಎಂದು ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾ ಅವರು ಶುಕ್ರವಾರ ವ್ಯಂಗ್ಯವಾಡಿದ್ದಾರೆ.

ಮನೀಶ್ ಸಿಸೋಡಿಯಾ ಅವರ ವಿರುದ್ಧದ ಯೋಜಿತ ದಾಳಿ ಇದಾಗಿದೆ. ಇದು ಅರವಿಂದ ಕೇಜ್ರಿವಾಲ್ ಅವರನ್ನು ನಾಶಗೊಳಿಸುವ ಉದ್ದೇಶ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಅರವಿಂದ ಕೇಜ್ರಿವಾಲ್ ಅವರಿಗೆ ಸಾರ್ವಜನಿಕ ಬೆಂಬಲ ಹಾಗೂ ಹೆಚ್ಚುತ್ತಿರುವ ಜನಪ್ರಿಯತೆ ನೋಡಿ ಬಿಜೆಪಿ ಹಾಗೂ ಪ್ರಧಾನಿ ಮೋದಿಗೆ  ಭಯವಾಗಿದೆ. ಅವರು ನಮ್ಮ ಜನರು ಹಾಗೂ ನಾಯಕರ ಮೇಲೆ ಸಿಬಿಐಯಂತಹ ತನಿಖಾ ಸಂಸ್ಥೆಗಳನ್ನು ಛೂಬಿಟ್ಟಿದ್ದಾರೆ. ಅವರ ಒಂದೇ ಗುರಿ ಕೇಜ್ರಿವಾಲ್ ಅವರನ್ನು ನಾಶ ಮಾಡುವುದು ಎಂದು ಛಡ್ಡಾ ಹೇಳಿದ್ದಾರೆ.

ಆರೋಗ್ಯ ಹಾಗೂ ಶಿಕ್ಷಣದ ಕುರಿತ ಪಕ್ಷದ ಮಾದರಿಯನ್ನು ನಾಶಪಡಿಸಲು ಬಿಜೆಪಿ ಬಯಸಿದೆ ಎಂದು ಅವರು ತಿಳಿಸಿದರು.

‘‘ನಾವು 2 ಮಾದರಿಗಳ ಬಗ್ಗೆ ಮಾತನಾಡುತ್ತಿದ್ದೆವು. ಒಂದು ಶಿಕ್ಷಣ ಹಾಗೂ ಇನ್ನೊಂದು ಆರೋಗ್ಯ ಸೇವೆ. ಇದನ್ನು ಸ್ಥಗಿತಗೊಳಿಸಲು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜೈಲಿಗೆ ಕಳುಹಿಸಲಾಯಿತು. ಮನೀಶ್ ಸಿಸೋಡಿಯಾ ಅವರನ್ನು ಜೈಲಿಗೆ ಕಳುಹಿಸಲು ಅವರು ಸಿದ್ಧತೆ ಮಾಡುತ್ತಿದ್ದಾರೆ’’ ಎಂದು ಛಡ್ಡಾ ತಿಳಿಸಿದ್ದಾರೆ.

ಮಿಸ್ಡ್ ಕಾಲ್ ಅಭಿಯಾನಕ್ಕೆ ಸೇರಲು ಕೇಜ್ರಿವಾಲ್ ಕರೆ

ಸಿಬಿಐ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯ ಅವರ ನಿವಾಸಕ್ಕೆ ದಾಳಿ ಮಾಡಿದ ದಿನವೇ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ‘‘ಮಿಸ್ಡ್ ಕಾಲ್’’ ಅಭಿಯಾನ ಘೋಷಿಸಿದ್ದಾರೆ. ಅಲ್ಲದೆ ರಾಷ್ಟ್ರೀಯ ಮಿಷನ್‌ಗೆ ಕೈ ಜೋಡಿಸುವಂತೆ ಜನರನ್ನು ಆಗ್ರಹಿಸಿದ್ದಾರೆ.

‘‘ಭಾರತವನ್ನು ನಂಬರ್ 1 ಮಾಡಲು ನಮ್ಮ ರಾಷ್ಟ್ರೀಯ ಮಿಷನ್‌ಗೆ ಸೇರಲು, ದಯವಿಟ್ಟು 9510001000ಕ್ಕೆ ಮಿಸ್ಡ್ ಕಾಲ್ ನೀಡಿ. ಭಾರತವನ್ನು ಉನ್ನತ ಮಟ್ಟಕ್ಕೆ ತಲುಪಿಸೋಣ’’ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ವೀಡಿಯೊ ಭಾಷಣದಲ್ಲಿ ಹೇಳಿದ್ದಾರೆ.

‘‘ಸಿಬಿಐ ದಾಳಿಯ ಕುರಿತು ಆತಂಕಪಡುವ ಅಗತ್ಯತೆ ಇಲ್ಲ. ಅವರು ಕಾರ್ಯ ನಿರ್ವಹಿಸಲು ಅವಕಾಶ ನೀಡಿ. ನಮಗೆ ಕಿರುಕುಳ ನೀಡಲು ಅವರಿಗೆ ಮೇಲಿನಿಂದ ಆದೇಶ ನೀಡಿದ್ದಾರೆ’’ ಎಂದು ಅವರು ಹೇಳಿದರು.

ಸಿಸೋಡಿಯ ಅವರ ದಿಲ್ಲಿ ಶಿಕ್ಷಣ ಮಾದರಿಯನ್ನು ಪ್ರಶಂಸಿದ ನ್ಯೂಯಾರ್ಕ್ ಟೈಮ್ಸ್‌ನ ಮುಖಪುಟದ ಲೇಖನವನ್ನು ಎತ್ತಿ ಹಿಡಿದ ಕೇಜ್ರಿವಾಲ್, ಅಡೆತಡೆಗಳು ಎದುರಾಗುತ್ತವೆ. ಆದರೆ, ನಮ್ಮ ಕೆಲಸ ನಿಲ್ಲುವುದಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News