ನಾಲ್ಕು ವರ್ಷಗಳ ಬಳಿಕ ಐಐಟಿಗಳಲ್ಲಿ ಮಹಿಳಾ ಕೋಟಾ ಭರ್ತಿ

Update: 2022-08-20 02:20 GMT
ಸಾಂದರ್ಭಿಕ ಚಿತ್ರ (PTI)

ಮುಂಬೈ: ದೇಶದ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳೆನಿಸಿದ ಐಐಟಿ(IIT)ಗಳಲ್ಲಿ ಮಹಿಳಾ ಮೀಸಲಾತಿ ನಿಗದಿಪಡಿಸಿದ ನಾಲ್ಕು ವರ್ಷಗಳ ಬಳಿಕ ಬಹುತೇಕ ಎಲ್ಲ ಕ್ಯಾಂಪಸ್‍ಗಳಲ್ಲಿ 2021-22ನೇ ಶೈಕ್ಷಣಿಕ ವರ್ಷದಲ್ಲಿ ಶೇಕಡ 20ರಷ್ಟು ವಿದ್ಯಾರ್ಥಿನಿಯರು ಇದ್ದಾರೆ. ಒಟ್ಟು 2990 ವಿದ್ಯಾರ್ಥಿನಿಯರು ಐಐಟಿಗಳಲ್ಲಿ ಪ್ರವೇಶ ಪಡೆದಿದ್ದಾರೆ. ಇದು ಈ ಮೀಸಲಾತಿ ಆರಂಭಿಸುವ ಹಿಂದಿನ ವರ್ಷ (2017)ಕ್ಕೆ ಹೋಲಿಸಿದರೆ ಮೂರು ಪಟ್ಟು ಅಧಿಕ. ಮಹಿಳಾ ಮೀಸಲಾತಿ ಸೀಟುಗಳನ್ನು ಆರಂಭಿಸುವ ಮುನ್ನ 995 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದರು.

2017ರಲ್ಲಿ ಮುಂಬೈ ಐಐಟಿ(IT-Bombay)ಯಲ್ಲಿ 100 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದರೆ, ಈ ಬಾರಿ ಅದು 271ಕ್ಕೇರಿದೆ. ದೆಹಲಿ ಐಐಟಿ(IIT Delhi)ಯಲ್ಲಿ ವಿದ್ಯಾರ್ಥಿನಿಯರ ಪ್ರವೇಶ ಸಂಖ್ಯೆ 90 ರಿಂದ 246ಕ್ಕೇರಿದೆ ಎನ್ನುವುದು 2021ರ ಪ್ರವೇಶಕ್ಕೆ ಸಂಬಂಧಿಸಿದ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. 2017 ಮತ್ತು 2021ರ ನಡುವೆ ಐಐಟಿಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ ವಾರ್ಷಿಕ 10988 ರಿಂದ 16296ಕ್ಕೇರಿದೆ. ವಿದ್ಯಾರ್ಥಿನಿಯರ ಸಂಖ್ಯೆ ಬಹುತೇಕ ಮೂರು ಪಟ್ಟು ಹೆಚ್ಚಿದ್ದು, 995ರಿಂದ 2990ಕ್ಕೇರಿದೆ.

ಆದರೆ ಈ ಅಭಿಯಾನ ಇಲ್ಲಿಗೆ ನಿಲ್ಲದು. ದೆಹಲಿ ಐಐಟಿ 50:50 ಲಿಂಗಾನುಪಾತದ ಕ್ಯಾಂಪಸ್ ಆಗುವ ಗುರಿ ಹೊಂದಿದೆ. "ಮಹಿಳೆಯರು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ನಾವು ವಿನ್ಯಾಸ, ಸಾರ್ವಜನಿಕ ನೀತಿಯಂಥ ಬಹುಮುಖಿ ಹೊಸ ಕೋರ್ಸ್‍ಗಳನ್ನು ಆರಂಭಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಬರುತ್ತಿದ್ದಾರೆ" ಎಂದು ದೆಹಲಿ ಐಐಟಿ ನಿರ್ದೇಶಕ ರಂಗನ್ ಬ್ಯಾನರ್ಜಿ ಹೇಳಿದ್ದಾರೆ.

ಐಐಟಿಗೆ ಈ ವರ್ಷ ಹೊಸಬರಿಗೆ ಪ್ರವೇಶ ಮುಕ್ತವಾಗಿಸಿದ ಬಳಿಕ ತಿರುಪತಿ ಐಐಟಿಯಲ್ಲಿ ಅತ್ಯುತ್ತಮ ಪುರುಷ- ಮಹಿಳೆ ಅನುಪಾತವಿದೆ. ಆದರೆ ಐಐಟಿ ಪಾಟ್ನಾ, ಖರಗಪುರ ಮತ್ತು ಜೋಧಪುರ ಈ ವಿಚಾರದಲ್ಲಿ ಸ್ವಲ್ಪ ಹಿಂದಿವೆ.

ಇದನ್ನೂ ಓದಿ: ಆರ್ಥಿಕ ಸಂಕಷ್ಟ: ಶ್ರೀಲಂಕಾ ಬಳಿಕ ಭೂತಾನ್ ಸರದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News