ವೋಟರ್‌ ಐಡಿಗೆ ಆಧಾರ್ ಲಿಂಕ್‌ ಮಾಡದಿದ್ದರೆ ಮತದಾನ ಮಾಡಲು ಸಾಧ್ಯವಿಲ್ಲವೇ? ಚುನಾವಣಾ ಆಯೋಗ ಹೇಳಿದ್ದೇನು?

Update: 2022-08-22 17:17 GMT

 ಹೊಸದಿಲ್ಲಿ,ಆ.22: ಆಧಾರ್ ಸಲ್ಲಿಸಿಲ್ಲವೆಂಬ ಕಾರಣಕ್ಕೆ ಮತದಾರರ ಪಟ್ಟಿಯಲ್ಲಿನ ನಮೂದನ್ನು ಅಳಿಸುವಂತಿಲ್ಲ ಎಂದು ಚುನಾವಣಾ ಆಯೋಗವು ಸೋಮವಾರ ಸ್ಪಷ್ಟಪಡಿಸಿದೆ. ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಜೋಡಣೆ ಕುರಿತು ಕೆಲವು ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗವು,ನಮೂನೆ-6ಬಿ ಅನ್ನು ಸಲ್ಲಿಸುವುದು ಸ್ವಯಂಪ್ರೇರಿತವಾಗಿದೆ. ಆಧಾರ್ ಸಲ್ಲಿಕೆಯಾಗಿಲ್ಲ ಎಂಬ ಕಾರಣಕ್ಕೆ ಮತದಾರರ ಪಟ್ಟಿಯಲ್ಲಿನ ನಮೂದನ್ನು ಅಳಿಸುವಂತಿಲ್ಲ ಎಂದು ತಿಳಿಸಿದೆ.

 
ಮತದಾರರ ಪಟ್ಟಿಯ ದತ್ತಾಂಶದೊಂದಿಗೆ ಜೋಡಣೆ ಮತ್ತು ದೃಢೀಕರಣಕ್ಕಾಗಿ ಮತದಾರರಿಂದ ಆಧಾರ್ ಸಂಗ್ರಹವು ಸ್ವಯಂಪ್ರೇರಿತವಾಗಿರಬೇಕು ಎಂದು ತಿಳಿಸಿ ತಾನು ಜುಲೈ 4ರಂದು ಎಲ್ಲ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗೆ ಬರೆದಿರುವ ಪತ್ರವನ್ನೂ ಆಯೋಗವು ಉಲ್ಲೇಖಿಸಿದೆ.

ಮತದಾರರ ಪಟ್ಟಿಯೊಂದಿಗೆ ಆಧಾರ್ ಜೋಡಣೆಗಾಗಿ ಮತದಾರರ ಆಧಾರ್ ವಿವರಗಳನ್ನು ಕೋರಲು ಪರಿಷ್ಕೃತ ನೋಂದಣಿ ನಮೂನೆಗಳಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಹಾಲಿ ಮತದಾರರಿಂದ ಆಧಾರ್ ವಿವರಗಳನ್ನು ಪಡೆಯಲು ಹೊಸ ನಮೂನೆ 6ಬಿ ಅನ್ನೂ ತರಲಾಗಿದೆ.

ಮತದಾರರ ಬಳಿ ಆಧಾರ್ ಸಂಖ್ಯೆ ಇಲ್ಲದಿದ್ದರೆ ನಮೂನೆ 6ಬಿಯಲ್ಲಿ ಉಲ್ಲೇಖಿಸಲಾಗಿರುವ 11 ಪರ್ಯಾಯ ದಾಖಲೆಗಳಲ್ಲಿ ಯಾವುದಾದರೂ ಒಂದರ ಪ್ರತಿಯನ್ನು ಸಲ್ಲಿಸುವಂತೆ ಅವರಿಗೆ ಸೂಚಿಸಬೇಕು ಎಂದೂ ಪತ್ರದಲ್ಲಿ ತಿಳಿಸಲಾಗಿದೆ ಎಂದೂ ಚುನಾವಣಾ ಆಯೋಗವು ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News