ಭಾರತದಲ್ಲಿ ಪ್ರತಿ 1000 ಜನರಿಗೆ ಕೇವಲ 1.7 ದಾದಿಯರು: ದಾದಿಯರ ಸಂಘಟನೆಗಳು
ಹೊಸದಿಲ್ಲಿ, ಆ. 23: ಭಾರತದಲ್ಲಿ ಪ್ರಸ್ತುತ ಪ್ರತಿ 1000 ಜನರಿಗೆ 1.7 ದಾದಿಯರು ಮಾತ್ರ ಇದ್ದಾರೆ. ಇದು ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿ 1,000 ಜನರಿಗೆ 3 ದಾದಿಯರು ಇರಬೇಕು ಎಂಬ ನಿಯಮಕ್ಕೆ ವ್ಯತಿರಿಕ್ತವಾಗಿದೆ ಎಂದು ದಾದಿಯರ ಸಂಘಟನೆಗಳು ತಿಳಿಸಿವೆ.
‘‘ನರ್ಸ್ ಮಿಡ್‌ವೈಫ್ ಫಾರ್ ಚೇಂಜ್’’ ಅಭಿಯಾನ ಮೊದಲ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.
ಇಂಡಿಯನ್ ನರ್ಸಿಂಗ್ ಕೌನ್ಸಿಲ್ (ಐಎನ್‌ಸಿ), ಆಲ್ ಇಂಡಿಯಾ ಗವರ್ನಮೆಂಟ್ ನರ್ಸಸ್ ಫೆಡರೇಶನ್ (ಎಐಜಿಎನ್‌ಎಫ್), ದಿ ಟ್ರೈನ್‌ಡ್ ನರ್ಸಸ್ ಅಸೋಸಿಯೇಶನ್ ಆಫ್ ಇಂಡಿಯಾ (ಟಿಎನ್‌ಎಐ), ಸೊಸೈಟಿ ಆಫ್ ಮಿಡ್‌ವೈವ್ಸ್-ಇಂಡಿಯಾ (ಎಸ್‌ಒಎಂಐ) ಹಾಗೂ ಝಿಪಿಎಗೊ ಮೊದಲಾದ ಸಂಘಟನೆಗಳು ಈ ಅಭಿಯಾನದ ಪಾಲುದಾರರಾಗಿವೆ.
ದಾದಿಯರು ಹಾಗೂ ಮಿಡ್‌ವೈಫ್‌ಗಳ ವೃತ್ತಿಯ ಮೇಲೆ ಪರಿಣಾಮ ಉಂಟು ಮಾಡುವ ವಿಷಯಗಳು ಹಾಗೂ ಇದುವರೆಗೆ ಆದ ಪ್ರಗತಿಯ ಕುರಿತು ಈ ಸಂಘಟನೆಗಳು ಸಭೆಯಲ್ಲಿ ಚರ್ಚೆ ನಡೆಸಿವೆ.
ಇಂಡಿಯನ್ ನರ್ಸಿಂಗ್ ಕೌನ್ಸಿಲ್‌ನ ಅಧ್ಯಕ್ಷ ಟಿ. ದಿಲೀಪ್ ಕುಮಾರ್ ಮಾತನಾಡಿ, ಆರೋಗ್ಯ ಸೇವೆ ಉದ್ಯಮದಲ್ಲಿ ದಾದಿಯರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಅವರ ಪ್ರಾಮುಖ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಕಳೆದ ಎರಡು ದಶಕಗಳಲ್ಲಿ ದಾದಿಯರ ಒಟ್ಟು ಲಭ್ಯತೆಯ ಅಂತರದಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ. ಕೇಂದ್ರ ಸರಕಾರದ ಹಲವು ಪ್ರಯತ್ನದ ಫಲವಾಗಿ ದೇಶದಲ್ಲಿ ದಾದಿಯರ ಕಾರ್ಯ ಪಡೆ ದ್ವಿಗುಣಗೊಂಡಿದೆ. ಪ್ರತಿ 1000 ಜನರಿಗೆ 2000ದಲ್ಲಿ 0.8 ಇದ್ದ ದಾದಿಯರ ಸಂಖ್ಯೆ 2020ರಲ್ಲಿ 1.7ಕ್ಕೆ ಏರಿಕೆಯಾಗಿದೆ ಎಂದರು.
ಟ್ರೈನ್ಡ್ ನರ್ಸಸ್ ಅಸೋಸಿಯೇಶನ್ ಆಫ್ ಇಂಡಿಯಾದ ಅಧ್ಯಕ್ಷ, ಪ್ರೊ. ರಾಯ್ ಕೆ. ಜಾರ್ಜ್ ಮಾತನಾಡಿ, ನರ್ಸಸ್ ಮಿಡ್‌ವೈಫ್ ಫಾರ್ ಚೇಂಜ್ ಅಭಿಯಾನ ದಾದಿ ವೃತ್ತಿಯಲ್ಲಿ ತೊಡಗಿಕೊಂಡಿರುವವರಿಗೆ ಬೆಂಬಲ ನೀಡಲು ಹಾಗೂ ಅವರ ಪರವಾಗಿ ಧ್ವನಿ ಎತ್ತಲು ಯಶಸ್ವಿಯಾಗಿದೆ ಎಂದರು.