ಪಾಕಿಸ್ತಾನಕ್ಕೆ ಆಕಸ್ಮಿಕವಾಗಿ ಉಡಾವಣೆಗೊಂಡ ಬ್ರಹ್ಮೋಸ್ ಕ್ಷಿಪಣಿ: ಭಾರತೀಯ ವಾಯು ಪಡೆಯ ಮೂವರು ಅಧಿಕಾರಿಗಳ ವಜಾ

Update: 2022-08-23 18:24 GMT
ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ, ಆ. 23: ಬ್ರಹ್ಮೋಸ್ ಕ್ಷಿಪಣಿ ಪಾಕಿಸ್ತಾನಕ್ಕೆ ಆಕಸ್ಮಿಕವಾಗಿ ಉಡಾವಣೆಗೊಂಡಿರುವುದಕ್ಕೆ ಸಂಬಂಧಿಸಿ ರಕ್ಷಣಾ ಸಚಿವಾಲಯ ಮಂಗಳವಾರ ಭಾರತೀಯ ವಾಯು ಪಡೆಯ ಮೂವರು ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿದೆ. ತೀವ್ರ ಗತಿಯ ಕ್ಷಿಪಣಿ ತನ್ನ ವಾಯು ಪ್ರದೇಶಕ್ಕೆ ಪ್ರವೇಶಿಸಿತು ಹಾಗೂ ಖನೆವಾಲ್ ಜಿಲ್ಲೆಯ ಮಿಯಾನ್ ಚನನ್ನು ನಗರದ ಸಮೀಪ ಪತನಗೊಂಡಿತು. ಇದರಿಂದ ಕೆಲವು ನಾಗರಿಕರ ಸೊತ್ತುಗಳಿಗೆ ಹಾನಿ ಉಂಟಾಗಿವೆ ಎಂದು ಪಾಕಿಸ್ತಾನ ಮಾರ್ಚ್ ೯ರಂದು ಹೇಳಿತ್ತು.

ಘಟನೆಯನ್ನು ‘ತೀವ್ರ ವಿಷಾದನೀಯ’ ಎಂದು ಭಾರತದ ರಕ್ಷಣಾ ಸಚಿವಾಲಯ ವ್ಯಾಖ್ಯಾನಿಸಿದೆ. ಅಲ್ಲದೆ, ದಿನನಿತ್ಯದ ನಿರ್ವಹಣಾ ಕಾರ್ಯಾಚರಣೆ ಸಂದರ್ಭ ‘‘ತಾಂತ್ರಿಕ ಅಸಮರ್ಪಕತೆ’’ಯಿಂದ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಗೊಂಡಿದೆ ಎಂದು ಅದು ಹೇಳಿತ್ತು. 

ಪ್ರಮಾಣಿತ ಕಾರ್ಯ ವಿಧಾನದಿಂದ ಮೂವರು ಅಧಿಕಾರಿಗಳು ವಿಮುಖರಾಗಿರುವುದರಿಂದ ಈ ಉಡಾವಣೆ ಸಂಭವಿಸಿದೆ ಎಂಬುದು ಪತ್ತೆಯಾಗಿರುವುದರಿಂದ ಈ ಘಟನೆಯ ತನಿಖೆಗೆ ಕೋರ್ಟ್ ಆಫ್ ಎನ್‌ಕ್ವಯರಿ ರೂಪಿಸಲಾಗಿದೆ ಎಂದು ಭಾರತೀಯ ವಾಯು ಪಡೆ ಮಂಗಳವಾರ ಹೇಳಿದೆ. 

ಘಟನೆಗೆ ಈ ಮೂವರು ಅಧಿಕಾರಿಗಳನ್ನು ಪ್ರಾಥಮಿಕವಾಗಿ ಹೊಣೆಗಾರರನ್ನಾಗಿ ಮಾಡಲಾಗಿದೆ. ಈ ಮೂವರು ಅಧಿಕಾರಿಗಳ ಸೇವೆಯನ್ನು ಕೂಡಲೇ ಅನ್ವಯವಾಗುವಂತೆ ಕೇಂದ್ರ ಸರಕಾರ ಅಮಾನತುಗೊಳಿಸಿದೆ. ಅಮಾನತು ಆದೇಶವನ್ನು ಈ ಅಧಿಕಾರಿಗಳಿಗೆ ಆಗಸ್ಟ್ ೨೩ರಂದು ನೀಡಲಾಗಿದೆ ಎಂದು ವಾಯು ಪಡೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News