ಬಿಲ್ಕಿಸ್‌ ಬಾನು ಪ್ರಕರಣದ ಆರೋಪಿಗಳ ಬಿಡುಗಡೆ ಕುರಿತು ಗುಜರಾತ್‌ ಸರಕಾರಕ್ಕೆ ಸುಪ್ರೀಂಕೋರ್ಟ್‌ ನೋಟಿಸ್

Update: 2022-08-25 06:42 GMT

ಹೊಸದಿಲ್ಲಿ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳಿಗೆ ಗುಜರಾತ್ ಸರ್ಕಾರ ವಿನಾಯಿತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇಂದು ಆಲಿಸಿದ್ದು, ಈ ಕುರಿತು ಗುಜರಾತ್‌ ಸರಕಾರಕ್ಕೆ ನೋಟಿಸ್‌ ಹೊರಡಿಸಿದೆ ಎಂದು ತಿಳಿದು ಬಂದಿದೆ. ಪ್ರಕರಣದ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಲಾಗಿದೆ ಎಂದು livelaw ವರದಿ ಮಾಡಿದೆ.

 "ಬಿಲ್ಕಿಸ್‌ ಬಾನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಿಡುಗಡೆ ಮಾಡುವ ವೇಳೆ ʼಬುದ್ಧಿಶಕ್ತಿಯನ್ನು ಬಳಸಲಾಗಿದೆಯೋ? ಇಲ್ಲವೋ?ʼ ಎಂದೂ ಪರಿಶೀಲಿಸಬೇಕಾಗಿದೆ" ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಸಿಪಿಐ(ಎಂ) ಪಾಲಿಟ್‌ಬ್ಯುರೊ ಸದಸ್ಯೆ ಸುಭಾಷಿಣಿ ಅಲಿ, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತರು ಸಲ್ಲಿಸಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದೆ.

ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠವು ಪ್ರಕರಣದಲ್ಲಿ ಅಪರಾಧಿಗಳ ಬಿಡುಗಡೆ ಮಾಡುವುದರ ವಿರುದ್ಧ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ವಕೀಲೆ ಅಪರ್ಣಾ ಭಟ್ ಅವರ ಸಲ್ಲಿಕೆಗಳನ್ನು ಗಮನಿಸಿತ್ತು.

ಐದು ತಿಂಗಳ ಗರ್ಭಿಣಿಯಾಗಿದ್ದಾಗ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು ಮತ್ತು ಆಕೆಯ ಪುಟ್ಟ ಮಗು ಸೇರಿದಂತೆ ಕುಟುಂಬ ಸದಸ್ಯರ ಕೊಲೆ ಆರೋಪದ ಮೇಲೆ ಜನವರಿ 2008 ರಲ್ಲಿ ಮುಂಬೈನ ಸಿಬಿಐ ನ್ಯಾಯಾಲಯವು ಪ್ರಕರಣದ ಹನ್ನೊಂದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ನಂತರ ಈ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News