ಜ್ಞಾನವಾಪಿ ಮಸೀದಿ ಪ್ರಕರಣ: ತೀರ್ಪನ್ನು ಸೆಪ್ಟೆಂಬರ್ 12ಕ್ಕೆ ಕಾದಿರಿಸಿದ ನ್ಯಾಯಾಲಯ

Update: 2022-08-25 11:08 GMT

 ವಾರಣಾಸಿ: ವಾರಣಾಸಿಯ ಜ್ಞಾನವಾಪಿ ಮಸೀದಿ-ಶೃಂಗಾರ ಗೌರಿ(Gyanavapi) ಸಂಕೀರ್ಣ ಪ್ರಕರಣದಲ್ಲಿನ ತನ್ನ ತೀರ್ಪನ್ನು ಇಲ್ಲಿನ ಜಿಲ್ಲಾ ನ್ಯಾಯಾಲಯ ಸೆಪ್ಟೆಂಬರ್ 12ಕ್ಕೆ ಕಾದಿರಿಸಿದೆ. ಈ ಪ್ರಕರಣದಲ್ಲಿ ಇತ್ತಂಡಗಳ ವಾದ-ಪ್ರತಿವಾದಗಳು ಬುಧವಾರ ಪೂರ್ಣಗೊಂಡಿವೆ.

ಮಸೀದಿಯ ಗೋಡೆಯ ಹೊರ ಆವರಣದಲ್ಲಿರುವ ದೇವರ ಮೂರ್ತಿಗಳನ್ನು ಪ್ರತಿ ನಿತ್ಯ ಪೂಜಿಸಲು ಅವಕಾಶ ಕಲ್ಪಿಸಬೇಕೆಂದು ಕೋರಿ ಐದು ಮಂದಿ ಮಹಿಳೆಯರು ಅರ್ಜಿ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ಅಂಜುಮಾನ್ ಇಂತೆಝಾಮಿಯಾ(Anjuman Intezamia) ಮಸೀದಿ ಸಮಿತಿ ಪ್ರತಿವಾದಿಯಾಗಿದ್ದು ಈ ಮಸೀದಿ ಒಂದು ವಕ್ಫ್(wakf) ಆಸ್ತಿಯಾಗಿರುವುದರಿಂದ  ವಿಚಾರಣೆ ನಡೆಸಲು ನ್ಯಾಯಾಲಯಕ್ಕೆ ಅಧಿಕಾರವಿಲ್ಲ ಎಂದು ವಾದಿಸಿತ್ತು.

1992ರಲ್ಲಿ ಉತ್ತರ ಪ್ರದೇಶ ಸರಕಾರ ಮತ್ತು ವಕ್ಫ್ ಮಂಡಳಿಯ ನಡುವಿನ ಒಪ್ಪಂದದಂತೆ ಜ್ಞಾನವಾಪಿ ಸಂಕೀರ್ಣದ ಒಂದು ಭಾಗವನ್ನು ಪೊಲೀಸ್ ಕಂಟ್ರೋಲ್ ರೂಂ ಆಗಿ ಪರಿವರ್ತಿಸಲಾಗಿತ್ತು.

ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣದ ವೇಳೆಯೂ ಸರಕಾರ ಮಸೀದಿಯ ಸ್ವಲ್ಪ ಜಮೀನು ಪಡೆದು ಅದರ ಬದಲು ಬೇರೆ ಜಮೀನು ಒದಗಿಸಿತ್ತು, ಇದರಿಂದ ಈ ಮಸೀದಿ ವಕ್ಫ್ ಆಸ್ತಿಯೆಂಬುದು ಸಾಬೀತಾಗುತ್ತದೆ ಎಂದು ಮಸೀದಿ ಪರ ವಕೀಲರು ಹೇಳಿದ್ದರು.

ಹಿಂದು ಅರ್ಜಿದಾರರ ಪರ ವಕೀಲರು ತಮ್ಮ ವಾದ ಮಂಡನೆಯಲ್ಲಿ, 1969 ರಲ್ಲಿ ಔರಂಗ್‍ಜೇಬ್ ಇಲ್ಲಿನ ದೇವಸ್ಥಾನ ನೆಲಸಮಗೊಳಿಸಿ ಅದರ ಜಾಗದಲ್ಲಿ ಮಸೀದಿ ನಿರ್ಮಿಸಿದ್ದ ಎಂದು ಮಸೀದಿ ಸಮಿತಿ ಹೇಳಿತ್ತು ಎಂದು ಹೇಳಿಕೊಂಡಿದ್ದಾರೆ.

ಸುಪ್ರೀಂ ಕೋರ್ಟ್ ಸೂಚನೆಯಂತೆ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯ ನಡೆಸುತ್ತಿದೆ. ಈ ಹಿಂದೆ ಈ ಸಂಕೀರ್ಣದ ವೀಡಿಯೋ ಸಮೀಕ್ಷೆ ನಡೆಸುವಂತೆಯೂ ಕೆಳಗಿನ ಹಂತದ ನ್ಯಾಯಾಲಯ ಹೇಳಿತ್ತು. ಅಂತೆಯೇ ಸಮೀಕ್ಷೆ ಮೇ 16ರಂದು ಪೂರ್ಣಗೊಂಡು ಮೇ 19ಕ್ಕೆ ವರದಿ ಸಲ್ಲಿಕೆಯಾಗಿತ್ತು.

ಜ್ಞಾನವಾಪಿ ಮಸೀದಿಯ ವೀಡಿಯೋ ಸಮೀಕ್ಷೆ ವೇಳೆ ಅಲ್ಲಿ ಶಿವಲಿಂಗ ಪತ್ತೆಯಾಗಿತ್ತು ಎಂದು ದೂರುದಾರರು ಹೇಳಿದ್ದರೂ ಮಸೀದಿ ಆಡಳಿತ ಇದನ್ನು ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News