ರಾಜ್ಯದಲ್ಲಿ ಆಸ್ಪತ್ರೆಗಳಿಗಿಂತ ಧಾರ್ಮಿಕ ಕೇಂದ್ರಗಳು ಹೆಚ್ಚಾಗಿವೆ, ಅನಧಿಕೃತ ಕೇಂದ್ರಗಳನ್ನು ಮುಚ್ಚಿ: ಕೇರಳ ಹೈಕೋರ್ಟ್

Update: 2022-08-26 14:15 GMT
Photo: Kerala High Court website 

ತಿರುವನಂತಪುರಂ: ಅನುಮತಿಯಿಲ್ಲದೆ ನಡೆಯುವ ಎಲ್ಲಾ ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಮಂದಿರಗಳನ್ನು ಮುಚ್ಚುವಂತೆ ಕೇರಳ ಹೈಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ ಎಂದು Livelaw.com ವರದಿ ಮಾಡಿದೆ.

ಹೊಸ ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಮಂದಿರಗಳನ್ನು ಸೂಕ್ತ ಸಂದರ್ಭಗಳಲ್ಲಿ ಮಾತ್ರ ಸ್ಥಾಪಿಸಲು ಅನುಮತಿ ನೀಡುವಂತೆ ಆದೇಶ ಹೊರಡಿಸುವಂತೆ ನ್ಯಾಯಮೂರ್ತಿ ಪಿವಿ ಕುಂಞಿಕೃಷ್ಣನ್ ಅವರು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ. ವಾಣಿಜ್ಯ ಕಟ್ಟಡವನ್ನು ಮಸೀದಿಯನ್ನಾಗಿ ಪರಿವರ್ತಿಸಲು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಈ ಆದೇಶ ನೀಡಿದೆ.

ಕಟ್ಟಡದ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಈಗಾಗಲೇ 36 ಮಸೀದಿಗಳಿದ್ದು, ಅದಾಗ್ಯೂ ಅರ್ಜಿದಾರರು ಪೂಜಾ ಸ್ಥಳವಾಗಿ ಪರಿವರ್ತಿಸಲು ಬಯಸಿದ್ದರು ಎಂದು ನ್ಯಾಯಮೂರ್ತಿ ಕುಂಞಿಕೃಷ್ಣನ್ ಗಮನಿಸಿದ್ದಾರೆ. ಕೇರಳವು ಈಗಾಗಲೇ ಅನೇಕ ಧಾರ್ಮಿಕ ಸ್ಥಳಗಳನ್ನು ಹೊಂದಿದೆ ಮತ್ತು ಜನಸಂಖ್ಯೆಯ ಅನುಪಾತಕ್ಕಿಂತ ತುಂಬಾ ಹೆಚ್ಚಾಗಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಕೇರಳದ ಧಾರ್ಮಿಕ ಕಟ್ಟಡ ರಚನೆಗಳ ಅಧ್ಯಯನವನ್ನು ಉಲ್ಲೇಖಿಸಿದ ನ್ಯಾಯಾಧೀಶರು, ಧಾರ್ಮಿಕ ಕಟ್ಟಡಗಳ ಸಂಖ್ಯೆ ರಾಜ್ಯದ ಹಳ್ಳಿಗಳ ಸಂಖ್ಯೆಗಿಂತ 10 ಪಟ್ಟು ಹೆಚ್ಚು ಮತ್ತು ಆಸ್ಪತ್ರೆಗಳಿಗಿಂತ 3.5 ಪಟ್ಟು ಹೆಚ್ಚಾಗಿದೆ ಎಂದು ಹೇಳಿರುವುದಾಗಿ bar&bench ವರದಿ ಮಾಡಿದೆ.

"ನಾವು ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಮಂದಿರಗಳಿಂದ ದಣಿದಿದ್ದೇವೆ. ಅಪರೂಪದ ಪ್ರಕರಣಗಳನ್ನು ಹೊರತುಪಡಿಸಿ ಯಾವುದೇ ಹೊಸ ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಮಂದಿರಗಳನ್ನು ಅನುಮತಿಸುವ ಸ್ಥಿತಿಯಲ್ಲಿ ನಾವು ಇಲ್ಲ" ಎಂದು ಕುಂಞಿಕೃಷ್ಣನ್ ತಮ್ಮ ತೀರ್ಪಿನಲ್ಲಿ ಬರೆದಿದ್ದಾರೆ.

ಮಲಪ್ಪುರಂನಲ್ಲಿ ಜಿಲ್ಲಾಧಿಕಾರಿಯೊಬ್ಬರು ವಾಣಿಜ್ಯ ಕಟ್ಟಡವನ್ನು ಮಸೀದಿಯಾಗಿ ಪರಿವರ್ತಿಸಲು ಅನುಮತಿ ನಿರಾಕರಿಸಿದ್ದರು. ಈ ತೀರ್ಪಿನ ವಿರುದ್ಧ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News