ಭಾರತದ ವಿರುದ್ಧ ಕ್ರಿಕೆಟ್; ಮನವಿಗೆ ಮುನ್ನವೇ ಕ್ರೀಸ್‍ನಿಂದ ಹೊರನಡೆದು ಪ್ರೇಕ್ಷಕರ ಮೆಚ್ಚುಗೆ ಪಡೆದ ಪಾಕ್ ಆಟಗಾರ

Update: 2022-08-29 02:55 GMT

ದುಬೈ: ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ರವಿವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಅನುಭವಿಸಿದೆ. ಆದರೆ ಭಾರತೀಯ ಆಟಗಾರರು ಅಂಪೈರ್‍ಗೆ ಮನವಿ ಮಾಡುವ ಮುನ್ನವೇ ಕ್ರೀಸ್‍ನಿಂದ ಹೊರ ನಡೆದ ಪಾಕಿಸ್ತಾನಿ ಬ್ಯಾಟ್ಸ್‌ಮನ್ ಫಖಾರ್ ಝಮಾನ್ ಪ್ರೇಕ್ಷಕರ ಮೆಚ್ಚುಗೆ ಗೆದ್ದರು.

ಭಾರತದ ವೇಗದ ಬೌಲರ್ ಆವೇಶ್ ಖಾನ್ ಅವರ ಬೌಲಿಂಗ್‍ನಲ್ಲಿ ಚೆಂಡು ಝಮಾನ್ ಅವರ ಬ್ಯಾಟ್ ಸವರಿಕೊಂಡು ವಿಕೆಟ್ ಕೀಪರ್ ಕೈ ಸೇರಿತು. ಪಾಕಿಸ್ತಾನ ಸ್ಟಾರ್ ಆಟಗಾರ ಬಾಬರ್ ಅಝಾಂ ಅವರನ್ನು ಕಳೆದುಕೊಂಡ ಬಳಿಕ ಕ್ರೀಸ್‍ಗೆ ಬಂದ ಝಮಾನ್, ಪವರ್‌ಪ್ಲೇಯ ಕೊನೆಯ ಓವರ್‍ನಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ಕ್ಯಾಚ್ ನೀಡಿದರು.

ಬ್ಯಾಟ್‍ಗೆ ಚೆಂಡು ತಗುಲಿದ್ದನ್ನು ಕಾಣದ ಕಾರ್ತಿಕ್ ಆಗಲೀ, ಬೌಲರ್ ಆವೇಶ್ ಖಾನ್ ಅವರಾಗಲೀ ಅಂಪೈರ್‍ಗೆ ಮನವಿ ಮಾಡಲಿಲ್ಲ. ಆದಾಗ್ಯೂ ಝಮಾನ್ ಕ್ರೀಸ್‍ನಿಂದ ಹೊರ ನಡೆದರು. ಆಗ ಅಂಪೈರ್ 'ಔಟ್' ಎಂದು ಬೆರಳೆತ್ತಿದರು.

ಪಾಕಿಸ್ತಾನದ ಮೊತ್ತ 42 ರನ್ ಆಗಿದ್ದಾಗ 6 ಎಸೆತಗಳಲ್ಲಿ 10 ರನ್ ಗಳಿಸಿದ ಝಮಾನ್ ಅವರನ್ನು ತಂಡ ಹೀಗೆ ಕಳೆದುಕೊಂಡಿತು. ಝಮಾನ್ ನಿರ್ಧಾರಕ್ಕೆ ಟ್ವಿಟ್ಟರ್‍ನಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಇದು ನಿಜವಾದ ಕ್ರೀಡಾಸ್ಫೂರ್ತಿ; ಶ್ಲಾಘನೀಯ ಕ್ರಮ ಎಂದು ಐಸಿಸಿ ಟ್ವಿಟ್ಟರ್ ಹ್ಯಾಂಡಲ್ ಟ್ವೀಟ್ ಮಾಡಿದೆ. ವಿರೋಧಿ ತಂಡದ ಆಟಗಾರರು ಮನವಿ ಮಾಡದಿದ್ದರೆ, ತಮ್ಮ ಬ್ಯಾಟಿಗೆ ಚೆಂಡು ತಗುಲಿಲ್ಲ ಎಂಬ ಭಾವನೆಯಿಂದ ಹಲವು ಮಂದಿ ಬ್ಯಾಟ್ಸ್‌ಮನ್‍ಗಳು ಕ್ರೀಸ್‍ನಲ್ಲೇ ಉಳಿಯುತ್ತಾರೆ. ಆದರೆ ಝಮಾನ್ ಅವರ ಕ್ರಮ ಅದ್ಭುತ ಕ್ರೀಡಾಪಟುತ್ವ ಎಂದು ಸಾಜ್ ಸಿದ್ದಿಕ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News