×
Ad

ಕೊರಗ ಸಮುದಾಯ ಶಿಕ್ಷಣ, ಸಂಘಟನೆ, ಹೋರಾಟದೊಂದಿಗೆ ಮುನ್ನೆಡೆಯುವುದು ಅಗತ್ಯ: ನ್ಯಾ.ರಾಜು ಎನ್.

Update: 2022-08-29 18:34 IST

ಕುಂದಾಪುರ : ಆದಿವಾಸಿಗಳಾದ ಕೊರಗ ಸಮುದಾಯವು ಇಂದಿಗೂ ಕೂಡ ನಿರಿಕ್ಷಿತ ಮಟ್ಟದಲ್ಲಿ ಸಮಾಜದ ಮುಖ್ಯವಾಹಿನಿಗೆ ಬರಲು ಪರಿತಪಿಸು ತ್ತಿದೆ. ಇಂತಹ ಕಾಲಘಟ್ಟದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂದೇಶ ದಂತೆ ಶಿಕ್ಷಣ, ಸಂಘಟನೆ, ಹೋರಾಟವನ್ನು ಮೂಲಮಂತ್ರವಾಗಿಸಿಕೊಂಡು ಮುನ್ನೆಡೆಯಬೇಕು. ಶಿಕ್ಷಣವೇ ಪ್ರಮುಖ ಆಯುಧ ಎಂಬ ಎಲ್ಲ ಮಹನೀಯರ ಆದರ್ಶ ಪಾಲಿಸಬೇಕು ಎಂದು ಕುಂದಾಪುರ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜು ಎನ್. ಹೇಳಿದ್ದಾರೆ.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಉಡುಪಿ ಜಿಲ್ಲಾ ಸಂಘಟನಾ ಸಮಿತಿ, ಕುಂದಾಪುರ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ವಿಶ್ವ ಆದಿವಾಸಿ ದಿನಾಚರಣೆ ಪ್ರಯುಕ್ತ ನಡೆದ ’ಆದಿವಾಸಿಗಳ ಅಭಿವೃದ್ಧಿ ಏಕೆ? ಮತ್ತು ಹೇಗೆ ಅವಲೋಕನ’, ಪರಿಶಿಷ್ಟ ಪಂಗಡ ಅದಿವಾಸಿ ಬುಡಕಟ್ಟು ಜನರಿಗೆ ’ಕಾನೂನು ಅರಿವು ಮಾಹಿತಿ ಕಾರ್ಯಾಗಾರ ಹಾಗೂ ಆದಿವಾಸಿ ಅಭಿವೃದ್ಧಿ, ಅಧ್ಯಯನ ಶಿಬಿರ’ ಉದ್ಘಾಟನೆ ಗೊಳಿಸಿ ಮಾತನಾಡಿದರು.

ಸರಕಾರ ಆದಿವಾಸಿಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ರೂಪಿಸಿದ್ದು ಶಿಕ್ಷಣ ಪಡೆಯುವ ಮೂಲಕ ಅದನ್ನು ಪಡೆಯಲು ಸಾಧ್ಯವಿದೆ. ಪಟ್ಟಣ ಪ್ರದೇಶದ ಸಂಪರ್ಕವಿಲ್ಲದೆ ಕಾಡುಪ್ರದೇಶದಲ್ಲಿ ಬದುಕುವ ಆದಿವಾಸಿಗಳಿಗೆ ಬದುಕಿನ ವಿವಿಧ ಮಜಲುಗಳನ್ನು, ಪೀಳಿಗೆಯನ್ನು ಅಭಿವೃದ್ಧಿಪಡಿಸಿಕೊಳ್ಳಲು ಕಾನೂನು ಮತ್ತು ಶಿಕ್ಷಣ ಅವಶ್ಯಕತೆ ಇದೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಮತ್ತು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆಯು ಪ.ಪಂಗಡ, ಬುಡಕಟ್ಟು ಸಮುದಾಯಕ್ಕೆ ಶೈಕ್ಷಣಿಕವಾಗಿ, ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತಿದೆ. ರಾಷ್ಟ್ರೀಯ ಬ್ಯಾಂಕುಗಳಲ್ಲಿ ಸ್ವ ಉದ್ಯೋಗ ಸಹಿತ ವಿವಿಧ ಉದ್ಯಮಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ, ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಯಾಗುವವರಿಗೆ ಪೂರ್ವ ತರಬೇತಿ ಸಹಿತ ವಿವಿಧ ಯೋಜನೆ ನೀಡುತ್ತಿದೆ. ಚಲನಚಿತ್ರ, ಕಿರುಚಿತ್ರ, ಸಾಕ್ಷ್ಯಚಿತ್ರ ನಿರ್ಮಿಸುವ ಪ.ಪಂಗಡದ ನಿರ್ದೇಶಕ, ನಿರ್ಮಾಪಕರಿಗೆ ೧೫ ಲಕ್ಷ ಪ್ರೋತ್ಸಾಹ ಧನ ನೀಡುತ್ತಿದೆ. ಈ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಗುರುತರ ಜವಬ್ದಾರಿ ಹಾಗೂ ಸಾಮಾಜಿಕ ಹೊಣೆಗಾರಿಕೆ ನಮ್ಮದಾಗಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಡಾ.ಎಸ್.ವೈ.ಗುರುಶಾಂತ ಆಶಯ ನುಡಿಗಳನ್ನಾಡಿ, ಭಾರತವು ವಿವಿಧ ಕ್ಷೇತ್ರಗಳಲ್ಲಿ ಪ್ರಪಂಚವನ್ನೇ ಗಮನ ಸೆಳೆದಿದೆ. ದೇಶದ ಸಂಸ್ಕೃತಿ, ಸಮೃದ್ದಿ ಹೆಚ್ಚಿಸಿ ಆಚಾರ-ವಿಚಾರದ ತಳಹದಿಯಾಗಿರುವ ಮೂಲನಿವಾಸಿಗಳು ಇನ್ನೂ ಕೂಡ ಸ್ವಾತಂತ್ರ್ಯ ಪೂರ್ವದಲ್ಲಿ ನೋವು ಅನುಭವಿಸದಂತೆ ಈಗಲೂ ಸಮಸ್ಯೆ ಯಲ್ಲಿಯೇ ಇದ್ದಾರೆ. ಭಾರತದಲ್ಲಿ ಆದಿವಾಸಿಗಳು ವಿಶ್ವದ ಬೇರೆ ಕಡೆಗಳಿಗಿಂತ ಹೆಚ್ಚಿದ್ದಾರೆ. ಕೊರಗರ ಸಾಕ್ಷರತೆ ಮತ್ತು ಆರೋಗ್ಯ ವಿಚಾರದಲ್ಲಿ ಇನ್ನಷ್ಟು ಪರಿವರ್ತನೆ ಅಗತ್ಯವಿದೆ ಎಂದರು.

ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆ ಉಡುಪಿಯ ವ್ಯವಸ್ಥಾಪಕ ವಿಶ್ವನಾಥ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆ ಕುಂದಾಪುರದ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್ ಇಲಾಖೆಗಳ ಯೋಜನೆ ಬಗ್ಗೆ ಮಾಹಿತಿ ನೀಡಿದರು. ‘ಆದಿವಾಸಿಗಳ ಸಂವಿಧಾನ ಬದ್ಧ ಹಕ್ಕುಗಳು ಮತ್ತು ಸಂರಕ್ಷಣೆ ಕಾನೂನುಗಳು’ ವಿಷಯದಲ್ಲಿ ಕುಂದಾಪುರದ ವಕೀಲ ಮಂಜುನಾಥ ಆರ್. ಅರಾಟೆ ವಿಚಾರ ಮಂಡಿಸಿದರು.

ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರದ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾ ಧೀಶ, ತಾಲೂಕು ಸಮಿತಿಯ ಸದಸ್ಯ ಕಾರ್ಯದರ್ಶಿ ಧನೇಶ್ ಮುಗಳಿ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಶ್ರೀಧರ್ ನಾಡ, ಗೌರವಾಧ್ಯಕ್ಷ ಸಂಜು ಕಾರೆಬೈಲು ಉಪಸ್ಥಿತರಿದ್ದರು.

ಕೊರಗ ಸಮುದಾಯದವರು ಪ್ರಾಮಾಣಿಕತೆ, ನಂಬಿಕೆ ಜಾಗೂ ಮುಗ್ದತೆ ಯುಳ್ಳವರಾಗಿದ್ದು ಇಂದಿಗೂ ಕೂಡ ನಿರೀಕ್ಷಿತ ಮಟ್ಟಕ್ಕೆ ಪ್ರಗತಿ ಸಾಧಿಸಿಲ್ಲ ಎಂಬುದು ದುರಂತ. ಶಿಕ್ಷಣದಿಂದ ಪ್ರತಿಯೊಬ್ಬ ವ್ಯಕ್ತಿ ಮೇಲಸ್ತರಕ್ಕೆ ಹೋಗಲು ಸಾಧ್ಯ. ಕೊರಗರ ಆರೋಗ್ಯ ಭಾಗ್ಯ ಸೇವೆ ಕೈಬಿಡುವ ನಿರ್ಧಾರ ಕೈಬಿಟ್ಟು ಈ ಹಿಂದಿನಂತೆ ಅವರಿಗೆ ಆರೋಗ್ಯ ಸೇವೆ ಸಿಗುವಂತಾಗಬೇಕು.
-ಬನ್ನಾಡಿ ಸೋಮನಾಥ ಹೆಗ್ಡೆ, ಅಧ್ಯಕ್ಷರು, ಕುಂದಾಪುರ ವಕೀಲರ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News