ಪತ್ನಿ, ಭಾವನಿಂದಲೇ ಪೋಕ್ಸೊ ನ್ಯಾಯಾಧೀಶ ಹತ್ಯೆ; ತಾಯಿ ಆರೋಪ

Update: 2022-09-04 02:35 GMT

ಭುವನೇಶ್ವರ: ಒಡಿಶಾದ ಕಟಕ್‍ನಲ್ಲಿ ಪೋಕ್ಸೊ ಕೋರ್ಟ್ ನ್ಯಾಯಾಧೀಶರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣ ಇದೀಗ ಹೊಸ ತಿರುವು ಪಡೆದಿದ್ದು, ಪತ್ನಿ ಹಾಗೂ ಭಾವ ಈ ಕೃತ್ಯ ಎಸಗಿದ್ದಾರೆ ಎಂದು ನ್ಯಾಯಾಧೀಶರ ತಾಯಿ ಆರೋಪ ಮಾಡಿದ್ದಾರೆ.

"ಮಗನನ್ನು ನಮ್ಮ ಮನೆಗೆ ಬರಲು ಅವರು ಬಿಡುತ್ತಿರಲಿಲ್ಲ. ನಮ್ಮ ಕುಟುಂಬದ ಜತೆ ಮಾತನಾಡಲು ಕೂಡಾ ಅವಕಾಶ ನೀಡುತ್ತಿರಲಿಲ್ಲ" ಎಂದು ಮರ್ಕಟನಗರ ಠಾಣೆಯಲ್ಲಿ ನೀಡಿರುವ ಲಿಖಿತ ದೂರಿನಲ್ಲಿ ತಾಯಿ ಆಪಾದಿಸಿದ್ದಾರೆ. "ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ಈ ವಯಸ್ಸಿನಲ್ಲಿ ನನ್ನನ್ನು ಸಾಕುವವರು ಯಾರು? ನಾನು ಮಗನನ್ನು ಬೆಳೆಸಿದ್ದೇನೆ. ಅವರು ಮಗನ ಶವವನ್ನು ಕೂಡಾ ನನಗೆ ತೋರಿಸಿಲ್ಲ" ಎಂದು ಅಳಲು ತೋಡಿಕೊಂಡಿದ್ದಾರೆ.

49 ವರ್ಷ ವಯಸ್ಸಿನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಶ್ರೇಣಿಯ ನ್ಯಾಯಾಂಗ ಅಧಿಕಾರಿಯ ಶವ ಅವರ ಅಧಿಕೃತ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿತ್ತು. ಕತ್ತಿನ ಸುತ್ತ ಗಾಯದ ಗುರುತುಗಳು ಇದ್ದವು. ಎರಡು ದಿನಗಳ ಕಾಲ ರಜೆಯಲ್ಲಿದ್ದ ನ್ಯಾಯಾಧೀಶರು ಶುಕ್ರವಾರ ರಜೆಯನ್ನು ಮತ್ತೆ ಒಂದು ದಿನ ವಿಸ್ತರಿಸಿದ್ದರು.

"ಪತ್ನಿ ಹಾಗೂ ಭಾವನಿಂದ ಹಲವು ವಿಧದಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದೇನೆ ಎಂದು ಮಗ ಹಲವು ಬಾರಿ ಅಸಹಾಯಕತೆ ವ್ಯಕ್ತಪಡಿಸಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಬೇಕು" ಎಂದು 75 ವರ್ಷ ವಯಸ್ಸಿನ ತಾಯಿ ಕೋರಿದ್ದಾರೆ. ಘಟನೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಮೃತ ನ್ಯಾಯಾಧೀಶರ ಮತ್ತೊಬ್ಬ ಸಂಬಂಧಿ ಆಗ್ರಹಿಸಿದ್ದಾರೆ.

"ನಮ್ಮ ಪಂಥದಲ್ಲಿ ಮೃತದೇಹವನ್ನು ಹೂಳಲಾಗುತ್ತದೆ. ಆದರೆ ಸೊಸೆ ಹಾಗೂ ಆಕೆಯ ಸಹೋದರ ನನ್ನ ಮಗನ ಶವವನ್ನು ಪುರಿಯಲ್ಲಿ ಸುಟ್ಟಿದ್ದಾರೆ. ಇದು ನಮ್ಮ ಸಂಪ್ರದಾಯಕ್ಕೆ ವಿರೋಧ. ಕಟಕ್ ಮತ್ತು ನಮ್ಮ ಗ್ರಾಮದ ನಡುವಿನ ಅಂತರ ಅತ್ಯಲ್ಪ. ಅವರು ಮೃತದೇಹವನ್ನು ಇಲ್ಲಿಗೆ ತರಬಹುದಿತ್ತು. ಕೊನೆಯ ಬಾರಿ ಮಗನನ್ನು ನೋಡುತ್ತಿದ್ದೆ. ಇದರ ಹಿಂದೆ ದೊಡ್ಡ ಪಿತೂರಿ ಇದೆ ಎಂಬ ಶಂಕೆ ನನಗಿದೆ" ಎಂದು ತಾಯಿ ವಿವರಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News