ಮಾಜಿ ಸಚಿವೆ ಕೆ. ಕೆ. ಶೈಲಜಾ ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ತಿರಸ್ಕರಿಸಲು ಹೇಳಿದ ಸಿಪಿಎಂ

Update: 2022-09-04 09:23 GMT

ತಿರುವನಂತಪುರಂ: ಕೇರಳದ ಮಾಜಿ ಆರೋಗ್ಯ ಸಚಿವೆ ಮತ್ತು ಹಿರಿಯ ಸಿಪಿಎಂ ನಾಯಕಿ ಕೆಕೆ ಶೈಲಜಾ(CPM leader KK Shailaja) ಅವರಿಗೆ ಪ್ರತಿಷ್ಠಿತ ರೆಮೋನ್ ಮ್ಯಾಗ್ಸೆಸೆ (Ramon Magsaysay) ಪ್ರಶಸ್ತಿ ತಿರಸ್ಕರಿಸಲು ಸಿಪಿಎಂ ಹೇಳಿದೆ ಎಂದು newindianexpress ವರದಿ ಮಾಡಿದೆ.

ಕೇರಳ‌ ರಾಜ್ಯದಲ್ಲಿ ನಿಪಾಹ್ ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ ಮತ್ತು  ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಮುನ್ನಡೆಸುವ ನಿಟ್ಟಿನಲ್ಲಿ ಶೈಲಜಾ ಅವರ ಬದ್ಧತೆ ಮತ್ತು ಸೇವೆಗಾಗಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರತಿಷ್ಠಾನವು ಶೈಲಜಾ ಅವರನ್ನು 64 ನೇ ಮ್ಯಾಗ್ಸೆಸೆ ಪ್ರಶಸ್ತಿಗೆ ನಿರ್ದೇಶಿಸಿತ್ತು.  ಕೇರಳ ನಿಪಾಹ್ ಏಕಾಏಕಿ ಮತ್ತು ಕೋವಿಡ್ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದಕ್ಕಾಗಿ  ಅವರು ಜಾಗತಿಕ ಮನ್ನಣೆ ಗಳಿಸಿದ್ದರು.

ಶೈಲಜಾ ಅವರು ವಿವಿಧ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳಿಂದ ಪ್ರಮುಖವಾಗಿ ಗುರುತಿಸಲ್ಪಟ್ಟಿದ್ದರು. ಒಂದು ಸಣ್ಣ ರಾಜ್ಯವು ವೈಜ್ಞಾನಿಕ ರೀತಿಯಲ್ಲಿ ಸಾಂಕ್ರಾಮಿಕ ರೋಗವನ್ನು ಹೇಗೆ ಸಮರ್ಥವಾಗಿ ಎದುರಿಸುತ್ತಿದೆ ಎಂಬುದನ್ನು ವರದಿಗಳು ಎತ್ತಿ ತೋರಿಸಿದ್ದವು. ತನ್ನ ಅಧಿಕಾರಾವಧಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿ ಜಾಗತಿಕ ಮನ್ನಣೆ ಪಡೆದಿದ್ದರೂ, ಕಳೆದ ಚುನಾವಣೆಯಲ್ಲಿ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ್ದರೂ ಶೈಲಜಾ ಅವರಿಗೆ ಸಚಿವ ಸ್ಥಾನವನ್ನು ನಿರಾಕರಿಸಲಾಗಿತ್ತು. ಪಕ್ಷದ ಈ ನಿರ್ಧಾರವು ಭಾರಿ ಚರ್ಚೆಯನ್ನು ಹುಟ್ಟು ಹಾಕಿತ್ತು.

ಪ್ರತಿಷ್ಠಾನವು ಪ್ರಶಸ್ತಿಯನ್ನು ಸ್ವೀಕರಿಸಲು ತನ್ನ ಇಚ್ಛೆಯನ್ನು ಲಿಖಿತವಾಗಿ ತಿಳಿಸುವಂತೆ ಶೈಲಜಾ ಬಳಿ ಕೇಳಿಕೊಂಡಿತ್ತು. ಸಿಪಿಎಂನ ಕೇಂದ್ರ ಸಮಿತಿ ಸದಸ್ಯೆಯಾಗಿರುವ ಶೈಲಜಾ ಅವರು ಈ ಬಗ್ಗೆ ಪಕ್ಷದ ನಾಯಕತ್ವದೊಂದಿಗೆ ಸಮಾಲೋಚನೆ ನಡೆಸಿದ್ದು, ಪಕ್ಷದ ನಾಯಕತ್ವವು ಪ್ರಶಸ್ತಿಯ ವಿವಿಧ ಅಂಶಗಳನ್ನು ನೋಡಿ, ಅದನ್ನು ಸ್ವೀಕರಿಸುವುದನ್ನು ವಿರೋಧಿಸಿತು ಎಂದು TheNewIndianExpress ವರದಿ ಮಾಡಿದೆ. 

ಆರೋಗ್ಯ ಸಚಿವೆಯಾಗಿ ಶೈಲಜಾ ಅವರು ಪಕ್ಷ ವಹಿಸಿದ ಕರ್ತವ್ಯವನ್ನು ಮಾತ್ರ ಮಾಡುತ್ತಿದ್ದಾರೆ ಎಂದು ಪಕ್ಷ ಭಾವಿಸಿದೆ. ಜೊತೆಗೆ, ನಿಪಾಹ್ ಏಕಾಏಕಿ ಮತ್ತು ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ರಾಜ್ಯದ ಪ್ರಯತ್ನಗಳು ಸಾಮೂಹಿಕ ಆಂದೋಲನದ ಭಾಗವಾಗಿದೆ ಮತ್ತು ಆದ್ದರಿಂದ ಅವರು ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸುವ ಅಗತ್ಯವಿಲ್ಲ ಎಂದು ಸಿಪಿಐಎಂ ಭಾವಿಸಿದೆ ಎಂದು ಪಕ್ಷದ ಮೂಲ ತಿಳಿಸಿವೆ.

ಇದನ್ನೂ ಓದಿ: ಕಳೆದ ಐದು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಯಾವುದೇ ಗಲಭೆ ನಡೆದಿಲ್ಲ: ಸಿಎಂ ಆದಿತ್ಯನಾಥ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News