ಇಂದು ಪ್ರಧಾನಿಯನ್ನು ಟೀಕಿಸುವುದು ಅಪಾಯಕಾರಿ: ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ಶ್ರೀಕೃಷ್ಣ

Update: 2022-09-04 12:17 GMT

ಹೊಸದಿಲ್ಲಿ,ಸೆ.4: ಪ್ರಜಾಪ್ರಭುತ್ವದಲ್ಲಿ ಸರಕಾರವನ್ನು ಟೀಕಿಸುವ ಹಕ್ಕು ಮೂಲಭೂತ ಹಕ್ಕು ಆಗಿದೆ ಮತ್ತು ಅದನ್ನು ನಿರ್ಬಂಧಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಒತ್ತಿ ಹೇಳಿರುವ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ಬಿ.ಎನ್.ಶ್ರೀಕೃಷ್ಣ(Justice B N Srikrishna) ಅವರು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

‘ಇಂದು ಪರಿಸ್ಥಿತಿ ಎಷ್ಟು ಕೆಟ್ಟಿದೆಯೆಂದರೆ ನಾನು ಸಾರ್ವಜನಿಕ ಚೌಕದಲ್ಲಿ ನಿಂತುಕೊಂಡು ಪ್ರಧಾನಿಯ(PM) ಮುಖವನ್ನು ನಾನು ಇಷ್ಟ ಪಡುವುದಿಲ್ಲ ಎಂದು ಹೇಳಿದರೆ ಯಾರಾದರೂ ನನ್ನ ಮೇಲೆ ದಾಳಿ ಮಾಡಬಹುದು,ಯಾವುದೇ ಕಾರಣವನ್ನು ನೀಡದೇ ನನ್ನನ್ನು ಜೈಲಿಗೆ ತಳ್ಳಬಹುದು ಎನ್ನುವುದನ್ನು ನಾನು ಒಪ್ಪಿಕೊಳ್ಳಲೇಬೇಕು’ ಎಂದು ಅವರು ಹೇಳಿದ್ದಾರೆ.

The Hindu ದೈನಿಕಕ್ಕೆ ನೀಡಿದ ಸಂದರ್ಶನದಲ್ಲಿ ನ್ಯಾ.ಶ್ರೀಕೃಷ್ಣ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ ರಿಜಿಜು ಅವರು, ‘ಜನತೆಯಿಂದ ಆಯ್ಕೆಯಾಗಿರುವ ಪ್ರಧಾನಿಯನ್ನು ನಿಂದಿಸಲು ಯಾವುದೇ ನಿರ್ಬಂಧವಿಲ್ಲದೆ ನಿರಂತರವಾಗಿ ಮಾತನಾಡುವ ಜನರು ಅಭಿವ್ಯಕ್ತಿ ಸ್ವಾತಂತ್ರದ ಕುರಿತು ಅಳುತ್ತಿದ್ದಾರೆ! ಕಾಂಗ್ರೆಸ್ ಪಕ್ಷವು ಹೇರಿದ್ದ ತುರ್ತು ಪರಿಸ್ಥಿತಿಯ ಬಗ್ಗೆ ಅವರೆಂದೂ ಮಾತನಾಡುವುದಿಲ್ಲ, ಕೆಲವು ಪ್ರಾದೇಶಿಕ ಪಕ್ಷಗಳ ಮುಖ್ಯಮಂತ್ರಿಗಳನ್ನು ಟೀಕಿಸಲು ಎಂದಿಗೂ ಧೈರ್ಯ ಮಾಡುವುದಿಲ್ಲ’ ಎಂದು ಟ್ವೀಟಿಸಿದ್ದಾರೆ. 

'ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರೋರ್ವರು ನಿಜಕ್ಕೂ ಈ ಮಾತುಗಳನ್ನು ಹೇಳಿದ್ದಾರೆಯೇ ಎನ್ನುವುದು ನನಗೆ ತಿಳಿದಿಲ್ಲ, ಅದು ನಿಜವಾಗಿದ್ದರೆ ಹೇಳಿಕೆಯು ಅವರು ಸೇವೆ ಸಲ್ಲಿಸಿದ್ದ ಸಂಸ್ಥೆಯನ್ನು ಅವಮಾನಿಸುತ್ತದೆ’ ಎಂದೂ ರಿಜಿಜು ಹೇಳಿದ್ದಾರೆ.

indianexpress ಪ್ರತಿಕ್ರಿಯೆಯನ್ನು ಕೋರಿ ನ್ಯಾ.ಶ್ರೀಕೃಷ್ಣರನ್ನು ಸಂಪರ್ಕಿಸಿದ್ದು, ‘ಸರಕಾರಿ ನೌಕರರು ತಮ್ಮ ವಾಕ್‌ಸ್ವಾತಂತ್ರದ ಮೂಲಭೂತ ಹಕ್ಕನ್ನು ಚಲಾಯಿಸುವ ಬಗ್ಗೆ ನಾನು ಮಾತನಾಡುತ್ತಿದ್ದೆ. ಟೀಕೆಗಳು ಸಭ್ಯವಾಗಿರುವವರೆಗೆ ಮತ್ತು ಅವುಗಳನ್ನು ಯೋಗ್ಯ ರೀತಿಯಲ್ಲಿ ಮಾಡಿದಾಗ ಅದು ಸೇವಾ ನಿಯಮಗಳಿಗೆ ಅಡ್ಡಿಯಾಗಬಾರದು. ಆದರೆ ನನ್ನ ಕಾಳಜಿಯು ಕಾನೂನಿನ ಆಡಳಿತ ಮತ್ತು ಸರಕಾರವು ಟೀಕಾಕಾರರಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದರ ಕುರಿತೂ ಇದೆ’ ಎಂದು ಅವರು ಹೇಳಿದರು.

ತೆಲಂಗಾಣದ ಐಎಎಸ್ ಅಧಿಕಾರಿಯೋರ್ವರು ತನ್ನ ವೈಯಕ್ತಿಕ ಟ್ವಿಟರ್ ಖಾತೆಯಿಂದ ಗುಜರಾತ್ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ ಬಿಲ್ಕಿಸ್ ಬಾನುರನ್ನು ಬೆಂಬಲಿಸಿ ಟ್ವೀಟಿಸುವ ಮೂಲಕ ತಪ್ಪು ಮಾಡಿದ್ದಾರೆಯೇ ಎಂದು ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗೆ ನ್ಯಾ.ಶ್ರೀಕೃಷ್ಣ, ವ್ಯಕ್ತಿಯೋರ್ವರು ಸರಕಾರಿ ಸೇವೆಗೆ ಸೇರಿದಾಗ ಕೆಲವು ಶಿಸ್ತು ನಿಯಮಗಳು ಅನ್ವಯಿಸುತ್ತವೆ ಎಂದು ಉತ್ತರಿಸಿದರು. ಎರಡು ಉಚ್ಚ ನ್ಯಾಯಾಲಯ ತೀರ್ಪುಗಳನ್ನು ಪ್ರಸ್ತಾಪಿಸಿದ ಅವರು, ಐಎಎಸ್ ಅಧಿಕಾರಿಗಳು ನ್ಯಾಯಸಮ್ಮತವಾಗಿ ಮತ್ತು ಸಭ್ಯ ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಹೊಂದಿದ್ದಾರೆ ಎಂಬ ಅಭಿಪ್ರಾಯಗಳನ್ನು ನ್ಯಾಯಾಧೀಶರು ತಳೆಯುತ್ತಿರುವುದು ಈಗಿನ ಪ್ರವೃತ್ತಿಯಾಗಿದೆ ಎಂದು ತಾನು ಭಾವಿಸಿದ್ದೇನೆ ಎಂದು ಹೇಳಿದರು.

ನ್ಯಾ.ಶ್ರೀಕೃಷ್ಣ ಅವರು 2006ರಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಹುದ್ದೆಯಿಂದ ನಿವೃತ್ತರಾದ ಬಳಿಕ ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರಗಳಿಗಾಗಿ ಹಲವಾರು ಸಮಿತಿಗಳ ನೇತೃತ್ವವನ್ನು ವಹಿಸಿದ್ದಾರೆ.

ಇದನ್ನೂ ಓದಿ: ಮಾಜಿ ಸಚಿವೆ ಕೆ. ಕೆ. ಶೈಲಜಾ ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ತಿರಸ್ಕರಿಸಲು ಹೇಳಿದ ಸಿಪಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News