×
Ad

ಬಿಜೆಪಿ ನಾಯಕರ ತಡರಾತ್ರಿಯ ಟೇಕ್‌ಆಫ್‌ನ್ನು ಆಕ್ಷೇಪಿಸಿದ್ದ ದೇವಘರ ಜಿಲ್ಲಾಧಿಕಾರಿ ವಿರುದ್ಧ ದೇಶದ್ರೋಹ ಪ್ರಕರಣ

Update: 2022-09-04 17:04 IST
ದೇವಘರ ಜಿಲ್ಲಾಧಿಕಾರಿ ಮಂಜುನಾಥ ಭಜಂತ್ರಿ (Twitter/@mbhajantri)

ಹೊಸದಿಲ್ಲಿ: ಬಿಜೆಪಿ(BJP) ಸಂಸದರಾದ ನಿಷಿಕಾಂತ ದುಬೆ(Nishikant Dubey) ಮತ್ತು ಮನೋಜ್ ತಿವಾರಿ(Manoj Tiwari) ಅವರು ಇಳಿಸಂಜೆಯಲ್ಲಿ ಜಾರ್ಖಂಡ್‌ನ(Jharkhand) ದೇವಘರ ವಿಮಾನ ನಿಲ್ದಾಣದಿಂದ ತಮ್ಮ ಬಾಡಿಗೆ ವಿಮಾನದ ಟೇಕ್‌ಆಫ್‌ಗೆ ಬಲವಂತದಿಂದ ಅನುಮತಿಯನ್ನು ಪಡೆದುಕೊಂಡಿದ್ದನ್ನು ಆಕ್ಷೇಪಿಸಿ ಅವರೊಂದಿಗೆ ವಾಗ್ವಾದ ನಡೆಸಿದ್ದ ದೇವಘರ ಜಿಲ್ಲಾಧಿಕಾರಿ(Deoghar DC) ಮಂಜುನಾಥ ಭಜಂತ್ರಿಯವರ(Manjunath Bhajantri) ವಿರುದ್ಧ ದಿಲ್ಲಿ ಪೊಲೀಸರು ಶನಿವಾರ ದೇಶದ್ರೋಹಕ್ಕಾಗಿ ಮತ್ತು ಐಪಿಸಿಯ ಇತರ ಕಲಮ್‌ಗಳಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಭಜಂತ್ರಿ ವಿರುದ್ಧ ದುಬೆ ದೂರು ಸಲ್ಲಿಸಿದ್ದರು.

ಆ.31ರಂದು ತಮ್ಮ ಬಾಡಿಗೆ ವಿಮಾನದ ಟೇಕ್‌ಆಫ್‌ಗಾಗಿ ಸುರಕ್ಷತಾ ಅನುಮತಿಯನ್ನು ಪಡೆದುಕೊಳ್ಳಲು ವಿಮಾನ ನಿಲ್ದಾಣದ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ಏರ್ ಟ್ರಾಫಿಕ್ ಕಂಟ್ರೋಲ್ ರೂಮ್‌ನ್ನು ಪ್ರವೇಶಿಸಿದ್ದಕ್ಕಾಗಿ ಜಾರ್ಖಂಡ್ ಪೊಲೀಸರು ದುಬೆ,ತಿವಾರಿ ಮತ್ತು ಇತರ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ ಬೆನ್ನಲ್ಲೇ ಭಜಂತ್ರಿ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆಯ ಬಳಿಕ ಭಜಂತ್ರಿ ಮತ್ತು ಬಿಜೆಪಿ ಸಂಸದರ ನಡುವೆ ಟ್ವಿಟರ್ ಕಾಳಗ ನಡೆದಿದ್ದು, ಅಂತಿಮವಾಗಿ ಪರಸ್ಪರರ ವಿರುದ್ಧ ದೂರುಗಳನ್ನು ದಾಖಲಿಸಿದ್ದಾರೆ.

ಸಜೀವವಾಗಿ ದಹನಗೊಳಿಸಲಾಗಿದ್ದ 19ರ ಹರೆಯದ ಯುವತಿಯ ಕುಟುಂಬದ ಭೇಟಿಗಾಗಿ ಬಿಜೆಪಿ ನಾಯಕರು ದುಮ್ಕಾಕ್ಕೆ ಪ್ರಯಾಣಿಸಿದ್ದರು. ಬಳಿಕ ಈ ನಾಯಕರು ಮತ್ತು ಇತರರು ದೇವಘರ ವಿಮಾನ ನಿಲ್ದಾಣದಿಂದ ವಾಪಸ್ ತೆರಳಬೇಕಾಗಿತ್ತು. ದೇವಘರ ವಿಮಾನ ನಿಲ್ದಾಣವು ಜು.12ರಂದು ಉದ್ಘಾಟನೆಗೊಂಡಿದ್ದು, ವಿಮಾನಗಳ ರಾತ್ರಿ ಕಾರ್ಯಾಚರಣೆಗಳಿಗಾಗಿ ಇನ್ನಷ್ಟೇ ಅನುಮತಿ ದೊರೆಯಬೇಕಿದೆ. ಪ್ರಸ್ತುತ ಸೂರ್ಯಾಸ್ತಕ್ಕೆ 30 ನಿಮಿಷಗಳ ಮೊದಲು ಯಾನಗಳನ್ನು ಆರಂಭಿಸಲು ಅವಕಾಶವಿದೆ. 

ವಿಮಾನ ನಿಲ್ದಾಣದ ಭದ್ರತಾ ಮುಖ್ಯಸ್ಥ ಸುಮನ್ ಆನಂದ ದೂರಿನ ಮೇರೆಗೆ ದುಬೆ, ತಿವಾರಿ, ದುಬೆಯವರ ಪುತ್ರರಾದ ಕನಿಷ್ಕಕಾಂತ ದುಬೆ ಮತ್ತು ಮಹಿಕಾಂತ ದುಬೆ, ದೇವಘರ ವಿಮಾನ ನಿಲ್ದಾಣದ ನಿರ್ದೇಶಕ ಮತ್ತಿತರರ ವಿರುದ್ಧ ಸೆ.1ರಂದು ಎಫ್‌ಐಆರ್ ದಾಖಲಾಗಿತ್ತು.

ಎಟಿಸಿ ರೂಮ್‌ನ್ನು ಪ್ರವೇಶಿಸುವ ಮತ್ತು ರಾತ್ರಿ ವೇಳೆಯಲ್ಲಿ ತಮ್ಮ ಬಾಡಿಗೆ ವಿಮಾನದ ಟೇಕ್-ಆಫ್‌ಗೆ ಅನುಮತಿ ನೀಡುವಂತೆ ಅಧಿಕಾರಿಗಳನ್ನು ಬಲವಂತಗೊಳಿಸುವ ಮೂಲಕ ಸಂಸದರು ಎಲ್ಲ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆನಂದ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

ದುಬೆ ಮತ್ತು ತಿವಾರಿ ಸೇರಿದಂತೆ ಒಂಭತ್ತು ಜನರ ವಿರುದ್ಧ ಇತರರ ಜೀವ ಅಥವಾ ಸುರಕ್ಷತೆಗೆ ಅಪಾಯವನ್ನೊಡ್ಡಿದ ಮತ್ತು ಅತಿಕ್ರಮ ಪ್ರವೇಶದ ಆರೋಪಗಳನ್ನು ಹೊರಿಸಲಾಗಿದೆ. ವಿಮಾನದ ಟೇಕ್-ಆಫ್‌ಗೆ ಅನುಮತಿಯನ್ನು ನಿರಾಕರಿಸಿದಾಗ ಪೈಲಟ್ ಮತ್ತು ಇತರ ಪ್ರಯಾಣಿಕರು ಎಟಿಸಿ ರೂಮ್‌ನ್ನು ಪ್ರವೇಶಿಸಿದ್ದರು ಮತ್ತು ಬಲವಂತದಿಂದ ಟೇಕ್-ಆಫ್‌ಗೆ ಅನುಮತಿಯನ್ನು ಪಡೆದುಕೊಂಡಿದ್ದರು ಎಂದು ಭದ್ರತಾ ಮುಖ್ಯಸ್ಥರು ತಿಳಿಸಿದ್ದಾರೆ. ಇಂತಹ ಕೃತ್ಯಗಳು ವಿಮಾನ ನಿಲ್ದಾಣದ ಸಾಮಾನ್ಯ ಭದ್ರತಾ ನಿಯಮಗಳ ಉಲ್ಲಂಘನೆಯಾಗಿವೆ ಎಂದು ಭಜಂತ್ರಿ ಅವರು ಜಾರ್ಖಂಡ್ ನಾಗರಿಕ ವಾಯುಯಾನ ಇಲಾಖೆಗೆ ಶುಕ್ರವಾರ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದರು.

ಇದನ್ನೂ ಓದಿ: ಉದ್ಯಮಿ ಸೈರಸ್‌ ಮಿಸ್ತ್ರಿ ರಸ್ತೆ ಅಪಘಾತದಲ್ಲಿ ಮೃತ್ಯು

ಆಗಿನಿಂದ ಭಜಂತ್ರಿ ಮತ್ತು ದುಬೆ ನಡುವೆ ಟ್ವಿಟರ್‌ನಲ್ಲಿ ವಾಗ್ವಾದ ಆರಂಭಗೊಂಡಿತ್ತು. ಭಜಂತ್ರಿಯನ್ನು ಜಾಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಭಟ್ಟಂಗಿ ಎಂದು ದುಬೆ ಬಣ್ಣಿಸಿದ್ದರೆ, ‘ಎಟಿಸಿ ರೂಮ್ ಪ್ರವೇಶಿಸಲು ನಿಮಗೆ ಅಧಿಕಾರ ನೀಡಿದವರು ಯಾರು? ನಿಮ್ಮ ಇಬ್ಬರು ಮಕ್ಕಳು ಎಟಿಸಿ ರೂಮ್ ಪ್ರವೇಶಿಸಲು ಯಾರು ಅಧಿಕಾರ ನೀಡಿದ್ದರು? ಎಟಿಸಿ ಕಟ್ಟಡವನ್ನು ಪ್ರವೇಶಿಸಲು ನಿಮ್ಮ ಬೆಂಬಲಿಗರಿಗೆ ಯಾರು ಅನುಮತಿ ನೀಡಿದ್ದರು?’ ಎಂದು ಭಜಂತ್ರಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. 

ಸೆ.2ರಂದು ಭಜಂತ್ರಿ ತನ್ನ ಟ್ವಿಟರ್ ಪೋಸ್ಟ್‌ನಲ್ಲಿ, ಬಿಜೆಪಿ ನಾಯಕರು ಮತ್ತು ಇತರರು ವಾಯು ಸಂಚಾರ ನಿಯಂತ್ರಣ ಕೊಠಡಿಗೆ ಅಕ್ರಮ ಪ್ರವೇಶ ಮಾಡಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ ಎಂದು ಹೇಳಿದ್ದರು.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ದುಬೆ, ಇದು ಅನುಮತಿಯಿಲ್ಲದೆ ಭದ್ರತಾ ವ್ಯವಸ್ಥೆಯನ್ನು ಭೇದಿಸುವ ಅಪರಾಧಿಯ ಶೈಲಿಯಾಗಿದೆ ಎಂದು ಹೇಳಿದ್ದರು. ವಿಮಾನ ನಿಲ್ದಾಣವನ್ನು ಪ್ರವೇಶಿಸುವ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಭಜಂತ್ರಿಯವರ ಅಧಿಕಾರವನ್ನು ಅವರು ಪ್ರಶ್ನಿಸಿದ್ದರು. ಹೀಗೆ ಮಾಡುವ ಮೂಲಕ ಅವರು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಮತ್ತು ರಾಷ್ಟ್ರೀಯ ಭದ್ರತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದರು.

ಇದಕ್ಕೆ ಪ್ರತಿಯಾಗಿ ಭಜಂತ್ರಿ,ತನ್ನ ಬಳಿ ಕಾನೂನುಬದ್ಧ ಪ್ರವೇಶದ ಪಾಸ್ ಇದೆ ಮತ್ತು ತಾನು ವಿಮಾನ ನಿಲ್ದಾಣದ ನಿರ್ದೇಶಕರ ಮಂಡಳಿಯ ಸದಸ್ಯನಾಗಿದ್ದೇನೆ ಎಂದು ಟ್ವೀಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News