ಪತ್ರಕರ್ತ ಸಿದ್ದಿಕ್ ಕಪ್ಪನ್ ಗೆ ಸುಪ್ರೀಂಕೋರ್ಟ್ ಜಾಮೀನು

Update: 2022-09-09 08:40 GMT

ಹೊಸದಿಲ್ಲಿ:  'ಪ್ರತಿಯೊಬ್ಬ ವ್ಯಕ್ತಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ' ಎಂದು ಹೇಳಿರುವ ಸುಪ್ರೀಂ ಕೋರ್ಟ್ ಶುಕ್ರವಾರ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ (Kerala Journalist Siddique Kappan)ಅವರಿಗೆ ಜಾಮೀನು ನೀಡಿದೆ ಎಂದು NDTV ವರದಿ ಮಾಡಿದೆ.

19 ವರ್ಷದ ಯುವತಿಯ ಸಾಮೂಹಿಕ ಅತ್ಯಾಚಾರದ ಬಗ್ಗೆ ವರದಿ ಮಾಡಲು ಉತ್ತರ ಪ್ರದೇಶದ ಹತ್ರಾಸ್‌ಗೆ ತೆರಳುತ್ತಿದ್ದಾಗ ಬಂಧಿಸಲ್ಪಟ್ಟ ಸಿದ್ದಿಕ್ ಕಪ್ಪನ್ 2020 ರಿಂದ ಉತ್ತರಪ್ರದೇಶದ ಜೈಲಿನಲ್ಲಿದ್ದರು. ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ(UAPA)  ಆರೋಪ ಹೊರಿಸಲಾಗಿತ್ತು.

ಪತ್ರಕರ್ತ ಕಪ್ಪನ್ ಮುಂದಿನ ಆರು ವಾರಗಳ ಕಾಲ ದಿಲ್ಲಿಯಲ್ಲಿ ಪೊಲೀಸ್ ಠಾಣೆಗೆ ಹಾಜರಾಗಬೇಕು ನಂತರ ಕೇರಳದಲ್ಲಿ ಪೊಲೀಸರ ಮುಂದೆ ಹಾಜರಾಗಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಅವರು ಹೇಳಿದ್ದಾರೆ.

ಮಲಯಾಳಂ ನ್ಯೂಸ್ ಪೋರ್ಟಲ್ ವರದಿಗಾರ ಸಿದ್ದಿಕ್ ಕಪ್ಪನ್ ಅವರಿಗೆ ಈ ಹಿಂದೆ ನ್ಯಾಯಾಲಯಗಳು ಜಾಮೀನು ನಿರಾಕರಿಸಿದ್ದವು. ಹತ್ರಾಸ್ ನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಕಪ್ಪನ್ ಯತ್ನಿಸುತ್ತಿದ್ದರು. ಆರೋಪಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜೊತೆ ನಂಟು ಹೊಂದಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು.

ತಾನು ನಿರಪರಾಧಿ. ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಪತ್ರಕರ್ತ ಕಪ್ಪನ್ ಹೇಳಿದ್ದರು.

ಕಪ್ಪನ್ ಅವರಿಗೆ ಗಲಭೆಗಳನ್ನು ಪ್ರಚೋದಿಸಲು ಹಣ ನೀಡಲಾಗಿದೆ ಹಾಗೂ ಅವರು ಮಾನ್ಯತೆ ಪಡೆದ ಪತ್ರಕರ್ತರಲ್ಲ. ಅವರು ಗಲಭೆ ಪರಿಸ್ಥಿತಿಯನ್ನು ಸೃಷ್ಟಿಸಲು ಹಾಗೂ ಸ್ಫೋಟಕಗಳನ್ನು ಬಳಸಲು ಪ್ರಯತ್ನಿಸುತ್ತಿದ್ದರು. ಅವರು ಪಿಎಫ್‌ಐಗೆ ಸೇರಿದವರು ಎಂದು ಉತ್ತರಪ್ರದೇಶದ ಪರ ವಕೀಲ ಮಹೇಶ್ ಜೇಠ್ಮಲಾನಿ ಇಂದು ನ್ಯಾಯಾಲಯದಲ್ಲಿ ವಾದಿಸಿದರು.

 "ಕಪ್ಪನ್ ಬಳಿ ಏನು ಪತ್ತೆಯಾಗಿದೆ? ಅವರ ಬಳಿ ಯಾವುದೇ ಸ್ಫೋಟಕ ವಸ್ತುಗಳು ಕಂಡುಬಂದಿಲ್ಲ, ಅವರ ಬಳಿ ವಸ್ತುಗಳು ಕಂಡುಬಂದಿಲ್ಲ.  ಆದರೆ ಕಾರಿನಲ್ಲಿ ಪತ್ತೆಯಾಗಿದ್ದನ್ನು ಅವರು ಪ್ರಚಾರಕ್ಕೆ ಬಳಸಿಲ್ಲ" ಎಂದು ಮುಖ್ಯ ನ್ಯಾಯಮೂರ್ತಿ ಲಲಿತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News