ರಾಹುಲ್‌ ಗಾಂಧಿ ಧರಿಸಿದ ಟಿಶರ್ಟ್‌ ಬೆಲೆಯನ್ನು ಗುರಿಯಾಗಿಸಿದ ಬಿಜೆಪಿ: ತಿರುಗುಬಾಣವಾದ 'ಬೆಲೆ ಅಸ್ತ್ರ'

Update: 2022-09-09 13:12 GMT
Photo: Facebook (BJP4India) 

ಹೊಸದಿಲ್ಲಿ: 'ಭಾರತ್‌ ಜೋಡೋ' ಯಾತ್ರೆಯ ಮೂಲಕ ಪಕ್ಷದ ಶಕ್ತಿವರ್ಧನೆಗೆ ಹೊರಟಿರುವ ಕಾಂಗ್ರೆಸ್‌(Congress) ನಾಯಕ ರಾಹುಲ್‌ ಗಾಂಧಿಯನ್ನು (Rahul Gandhi) ಲೇವಡಿ ಮಾಡಲು ಹೊರಟ ಬಿಜೆಪಿಗೆ(BJP) ತಿರುಗುಬಾಣವಾಗಿದೆ. ರಾಹುಲ್‌ ಗಾಂಧಿ ಅವರು ಧರಿಸಿರುವ ಬ್ಲುಬೆರಿ ಬ್ರ್ಯಾಂಡಿನ ಟಿ-ಶರ್ಟ್‌ ಬೆಲೆಯನ್ನು ಉಲ್ಲೇಖಿಸಿ ಬಿಜೆಪಿ ತನ್ನ ಅಧಿಕೃತ ಫೇಸ್‌ಬುಕ್‌ ಪೇಜಿನಲ್ಲಿ ಹಾಕಿರುವ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಬಿಜೆಪಿ ವಿರುದ್ಧವೇ ಕಾಮೆಂಟ್‌ ಮಾಡುತ್ತಿದ್ದಾರೆ. 

'ಭಾರತ್‌ ದೇಖೋ' ಎಂಬ ಒಕ್ಕಣೆಯೊಂದಿಗೆ ರಾಹುಲ್‌ ಗಾಂಧಿ ಚಿತ್ರ ಹಾಗೂ ರಾಹುಲ್‌ ಧರಿಸಿರುವ ಬ್ಲುಬೆರಿ ಬ್ರ್ಯಾಂಡಿನ ಟಿ ಶರ್ಟ್‌ ಬೆಲೆಯನ್ನು ಬಿಜೆಪಿ ಹಂಚಿಕೊಂಡಿದೆ. ಬಿಜೆಪಿ ಹಂಚಿಕೊಂಡ ಫೋಟೋದಲ್ಲಿ ರಾಹುಲ್‌ ಧರಿಸಿರುವ ಟಿಶರ್ಟ್‌ ಬೆಲೆ  41,257 ರೂ. ಎಂಬ ಮಾಹಿತಿ ಇದೆ. ಈ ಫೋಸ್ಟ್‌ ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, ಇನ್ನು ಇದಕ್ಕಾಗಿಯೂ ಬಿಜೆಪಿ ಇಡಿ, ಐಟಿ ಮೂಲಕ ದಾಳಿ ಮಾಡಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. 

ಅದೇ ವೇಳೆ, ಮತ್ತೊಬ್ಬ ನೆಟ್ಟಿಗರು, ಪ್ರಧಾನಿ ನರೇಂದ್ರ ಮೋದಿ ಅವರು ಧರಿಸುವ ಸೂಟು ಬೂಟಿನ ಬೆಲೆ ಎಷ್ಟು ಎಂದು ಕೇಳಿದ್ದಾರೆ. 

ನೀಲಿಮಾ ಶಾ ಎಂಬವರು ಪ್ರತಿಕ್ರಿಯಿಸಿ, "ಮೋತಿಲಾಲ್ ನೆಹರು ಅವರು 1920 ರಲ್ಲಿ ವರ್ಷಕ್ಕೆ 30,000 ರೂಪಾಯಿ ತೆರಿಗೆ ಪಾವತಿಸುತ್ತಿದ್ದರು, ಆಗ ನಿಮ್ಮ ದೇವರು ಬುಲ್‌ ಬುಲ್ ಮೇಲೆ ಸವಾರಿ ಮಾಡುತ್ತಾ, 60 ರುಪಾಯಿ ಪಿಂಚಣಿಗಾಗಿ 17 ಬಾರಿ ಕ್ಷಮಾಪಣೆ ಪತ್ರವನ್ನು ಬರೆಯುತ್ತಿದ್ದರು. ಅವರ (ನೆಹರೂ) ಕುಟುಂಬವು 1900ರಲ್ಲಿ ಆನಂದಭವನವನ್ನು ₹ 19,000ಕ್ಕೆ ಖರೀದಿಸಿತು. ಈ ಸಮಯದಲ್ಲಿ ₹ 19,000 ಎಷ್ಟು ಎಂದು ಮೌಲ್ಯಮಾಪನ ಮಾಡಿ. ಎಲ್ಲವನ್ನೂ ಎತ್ತಿಕೊಂಡು ದೇಶಕ್ಕೆ ಕೊಟ್ಟರು. ಯಾರ ಬಳಿ ಇದೆಯೋ ಅವರು ಅದನ್ನು ಧರಿಸುತ್ತಾರೆ.ʼ ಎಂದು ಬರೆದಿದ್ದಾರೆ.

ವಂದನ್‌ ಕುಮಾರ್‌ ಭದನಿ ಎಂಬವರು ಪ್ರತಿಕ್ರಿಯಿಸಿ, ಪ್ರಧಾನಿ ಮೋದಿಯವರ 10 ಲಕ್ಷ ರುಪಾಯಿ ಸೂಟು ಬೂಟಿಗೆ ಇಂತಹ 250 ಟಿ ಶರ್ಟುಗಳು ಬರುತ್ತವೆ ಎಂದು ಬರೆದಿದ್ದಾರೆ. 

ಮೋದಿ 10 ಲಕ್ಷದ ಸೂಟು ಧರಿಸಬಹುದು, ಬೇರೆ ಯಾರೂ 41 ಸಾವಿರದ ಟಿಶರ್ಟ್‌ ಧರಿಸಬಾರದು ಎಂದು ಪವನ್‌ ದೇವ್‌ ಸಿಂಗ್‌ ಎಂಬವರು ವ್ಯಂಗ್ಯವಾಗಿ ಕಮೆಂಟ್‌ ಮಾಡಿದ್ದಾರೆ. 

ಮತ್ತೊಬ್ಬ ನೆಟ್ಟಿಗರು, “ದೇಶದ ಭಿಕ್ಷುಕರು 10 ಲಕ್ಷದ ಸೂಟು ಧರಿಸಬಹುದಾದರೆ, 41 ಸಾವಿರದ ಟಿ ಶರ್ಟಿನಲ್ಲಿ ಏನು ವಿಶೇಷತೆಯಿದೆ” ಎಂದು ಪ್ರಶ್ನಿಸಿದ್ದಾರೆ. 

ಹಿಮಾಂಶು ಪಾಟಕ್‌ ಎಂಬವರು ಪ್ರತಿಕ್ರಿಯಿಸಿ, “ಹಣದುಬ್ಬರ ನಿಮ್ಮ ಕೊಡುಗೆ, 4 ಸಾವಿರದ ಟಿಶರ್ಟ್‌ ಬೆಲೆ, 41 ಸಾವಿರಕ್ಕೆ ಏರಿದೆ” ಎಂದು ಲೇವಡಿ ಮಾಡಿದ್ದಾರೆ. 

“ಒಂದು ಕಡೆ ರಾಹುಲ್‌ ಗಾಂಧಿ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಬಿಜೆಪಿ ಹೇಳುತ್ತದೆ, ಅದೇ ವೇಳೆ ರಾಹುಲ್‌ ಗಾಂಧಿ ಧರಿಸುವ ಟಿಶರ್ಟ್‌ ಬೆಲೆ, ಸೈಝ್‌ಗಳನ್ನು ನೋಡುವುದನ್ನೇ ಸಂಬಿತ್‌ ಪಾತ್ರರಂತಹವರು ಕಾಯಕ ಮಾಡಿಕೊಂಡಿದ್ದಾರೆ. ಇದು ಬಿಜೆಪಿಯ ಅಧಿಕೃತ ಖಾತೆಯೆಂದು ನಂಬಲು ಸಾಧ್ಯವಾಗುತ್ತಿಲ್ಲ” ಎಂದು ಮತ್ತೊಬ್ಬ ನೆಟ್ಟಿಗರು ಕಮೆಂಟಿಸಿದ್ದಾರೆ.

ಇದನ್ನೂ ಓದಿ: ತುಮಕೂರು ಪಾಲಿಕೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News