EWS ಕೋಟಾ ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ: 103ನೇ ತಿದ್ದುಪಡಿ ಸಂವಿಧಾನಕ್ಕೆ ವಂಚನೆಯಾಗಿದೆ ಎಂದ ಅರ್ಜಿದಾರರು

Update: 2022-09-13 15:23 GMT

ಹೊಸದಿಲ್ಲಿ,ಸೆ.13: ಆರ್ಥಿವಾಗಿ ದುರ್ಬಲ ವರ್ಗ (ಇಡಬ್ಲುಎಸ್) ಗಳಿಗೆ ಮೀಸಲಾತಿಗೆ ಆಧಾರವಾಗಿರುವ ಕಾನೂನು ಸಂವಿಧಾನಕ್ಕೆ ಮಾಡಿರುವ ವಂಚನೆಯಾಗಿದೆ ಎಂದು ಅರ್ಜಿದಾರರ ಸಮೂಹವನ್ನು ಪ್ರತಿನಿಧಿಸುತ್ತಿರುವ ವಕೀಲರು ಮಂಗಳವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಪಾದಿಸಿದರು.

ಸಮಾನತೆಯ ಹಕ್ಕನ್ನು ವ್ಯಾಖ್ಯಾನಿಸುವ ಮತ್ತು ಮೀಸಲಾತಿಗೆ ಆಧಾರವನ್ನು ಒದಗಿಸುವ 15 ಮತ್ತು 16ನೇ ವಿಧಿಗಳಲ್ಲಿ ಬದಲಾವಣೆಗಳನ್ನು ತಂದಿರುವ ಸಂವಿಧಾನಕ್ಕೆ 103ನೇ ತಿದ್ದುಪಡಿಯನ್ನು ಅರ್ಜಿದಾರರು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಮೋಹನ್ ಗೋಪಾಲ್ ಅವರು,‌ ಸಾಂವಿಧಾನಿಕ ತಿದ್ದುಪಡಿಯು ಜಾತಿಗೆ ಅನುಗುಣವಾಗಿ ದೇಶವನ್ನು ಒಡೆಯುತ್ತಿದೆ. ಈ ತಿದ್ದುಪಡಿಯನ್ನು ದುರ್ಬಲ ವರ್ಗಗಳನ್ನು ರಕ್ಷಿಸುವುದಕ್ಕಿಂತ ಮೇಲ್ವರ್ಗದವರನ್ನು ರಕ್ಷಿಸಲು ಸಾಧನವನ್ನಾಗಿ ನೋಡಲಾಗುತ್ತಿದೆ ಎಂದು ಹೇಳಿದರು.

ಕಡಿಮೆ ಪ್ರಾತಿನಿಧ್ಯದ ಗುಂಪುಗಳಿಗೆ ರಕ್ಷಣೆ ಒದಗಿಸುವುದು ಮೀಸಲಾತಿಯ ಉದ್ದೇಶವಾಗಿದೆ ಎಂದು ವಾದಿಸಿದ ಗೋಪಾಲ, ಆದಾಗ್ಯೂ ಈಗ ಎಂಟು ಲ.ರೂ.ಗಿಂತ ಕಡಿಮೆ ವಾರ್ಷಿಕ ಆದಾಯವಿರುವ ಜನರಿಗೆ ಮೀಸಲಾತಿಯು ದೊರೆಯುತ್ತಿದೆ ಎಂದು ಹೇಳಿದರು. ಶೇ.96ರಷ್ಟು ಭಾರತೀಯರು ನಾಲ್ವರ ಕುಟುಂಬಕ್ಕಾಗಿ 25,000 ರೂ.ಗೂ ಕಡಿಮೆ ಹಣವನ್ನು ಗಳಿಸುತ್ತಿದ್ದಾರೆ ಎಂದ ಅವರು,ನಾವು ಈ ಶೇ.96ರ ಗುಂಪಿಗೆ ತಲೆಬಾಗುವ ಮತ್ತು ಕೃಪೆ ತೋರಿಸುವ ಅಗತ್ಯವಿದೆ ಎಂದು ಹೇಳಿದರು.

ಹಿಂದುಳಿದ ವರ್ಗಗಳು ಮೀಸಲಾತಿಯ ಮೂಲಕ ಪ್ರಾತಿನಿಧ್ಯವನ್ನು ಬಯಸಿದ್ದವೇ ಹೊರತು ಆರ್ಥಿಕ ಏಳಿಗೆಯನ್ನಲ್ಲ ಎಂದು ವಾದಿಸಿದ ಅವರು,‘ನಮಗೆ ಮೀಸಲಾತಿಯಲ್ಲಿ ಆಸಕ್ತಿಯಿಲ್ಲ,ನಮಗೆ ಪ್ರಾತಿನಿಧ್ಯದಲ್ಲಿ ಆಸಕ್ತಿಯಿದೆ. ಮೀಸಲಾತಿಗಿಂತ ಉತ್ತಮ ಪ್ರಾತಿನಿಧ್ಯದ ವಿಧಾನವನ್ನು ಯಾರಾದರೂ ತಂದರೆ ನಾವು ಮೀಸಲಾತಿಯನ್ನು ಅರಬಿ ಸಮುದ್ರಕ್ಕೆ ಎಸೆಯುತ್ತೇವೆ ’ ಎಂದರು.

ಎಸ್‌ಸಿ-ಎಸ್‌ಟಿಗಳು ಮತ್ತು ಒಬಿಸಿಗಳಿಗೆ ನೀಡಲಾಗಿರುವ ಮೀಸಲಾತಿಯನ್ನು ಪಡೆಯಲು ಸಾಧ್ಯವಿಲ್ಲದ,ಆದರೆ ಕೌಟುಂಬಿಕ ವಾರ್ಷಿಕ ಆದಾಯ ಎಂಟು ಲ.ರೂ.ಗಿಂತ ಕಡಿಮೆಯಿರುವವರಿಗಾಗಿ ಸರಕಾರವು ಇಡಬ್ಲುಎಸ್ ಮೀಸಲಾತಿಯನ್ನು ತಂದಿದೆ. ಆದಾಗ್ಯೂ ಕುಟುಂಬವು ಐದು ಎಕರೆಗಿಂತ ಹೆಚ್ಚಿನ ಕೃಷಿಭೂಮಿಯನ್ನು ಅಥವಾ 1,000 ಚದುರಡಿ ವಸತಿ ಭೂಮಿಯನ್ನು ಹೊಂದಿದ್ದರೆ ಅಂತಹ ಕುಟುಂಬಕ್ಕೆ ಸೇರಿದ ವ್ಯಕ್ತಿ ಮೀಸಲಾತಿಗೆ ಅರ್ಹವಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News