×
Ad

CUET ಫಲಿತಾಂಶ ಪ್ರಕಟ: 19,865 ಮಂದಿಗೆ ಶೇಕಡ 100 ಅಂಕ !

Update: 2022-09-16 07:22 IST

ಹೊಸದಿಲ್ಲಿ: ವಿಶ್ವವಿದ್ಯಾನಿಲಯದಲ್ಲಿ ಪದವಿ ಪ್ರವೇಶಕ್ಕೆ ಇರುವ ಸಾಮಾನ್ಯ ವಿವಿ ಪ್ರವೇಶ ಪರೀಕ್ಷೆ (CUET-UG) ಫಲಿತಾಂಶ ಪ್ರಕಟವಾಗಿದ್ದು, 30 ವಿಷಯಗಳಲ್ಲಿ ಒಟ್ಟು 19,865 ಮಂದಿ ವಿದ್ಯಾರ್ಥಿಗಳು ಶೇಕಡ 100ರಷ್ಟು ಅಂಕ ಪಡೆದಿದ್ದಾರೆ.

ಇಂಗ್ಲಿಷ್‍ನಲ್ಲಿ ಗರಿಷ್ಠ ಎಂದರೆ 8236 ಮಂದಿ ಶೇಕಡ 100 ಅಂಕ ಪಡೆದಿದ್ದು, ರಾಜಕೀಯ ವಿಜ್ಞಾನ (2065) ನಂತರದ ಸ್ಥಾನದಲ್ಲಿದೆ. ವ್ಯವಹಾರ ಅಧ್ಯಯನ (1669) ಮೂರನೇ ಸ್ಥಾನದಲ್ಲಿದೆ. ಅಧಿಕೃತ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಶುಕ್ರವಾರ ಬೆಳಗ್ಗೆ ಪ್ರಕಟಿಸಲಿದ್ದು, ತಾನೇ ಹಾಕಿಕೊಂಡ ಗಡುವು ಅಂದರೆ ಗುರುವಾರ ರಾತ್ರಿ 10 ಗಂಟೆಗೆ ಫಲಿತಾಂಶ ಪ್ರಕಟಣೆಗೆ ಎನ್‍ಟಿಎ ವಿಫಲವಾಗಿದೆ.

ಜೀವಶಾತ್ರ, ಅರ್ಥಶಾಸ್ತ್ರ ಮತ್ತು ಮನಃಶಾಸ್ತ್ರ ವಿಷಯಗಳಲ್ಲಿ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೂರ್ಣಾಂಕಗಳನ್ನು ಪಡೆದಿದ್ದಾರೆ. ಇದರಿಂದಾಗಿ ಈ ಆರು ವಿಷಯಗಳಲ್ಲಿ ಪದವಿ ತರಗತಿ ಪ್ರವೇಶಕ್ಕೆ ಕಟಾಫ್ ಅಂಕಗಳು ಗರಿಷ್ಠ ಇರುವ ಸಾಧ್ಯತೆ ಇದೆ. ಒಟ್ಟು 14,90,293 ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, ಈ ಪೈಕಿ ಶೇಕಡ 60ರಷ್ಟು ವಿದ್ಯಾರ್ಥಿಗಳು ಅಂದರೆ 9,68,202 ಮಂದಿ ಪರೀಕ್ಷೆಗೆ ಹಾಜರಾಗಿದ್ದರು.

ಈ ಪರೀಕ್ಷೆಯ ಆಧಾರದಲ್ಲಿ 90 ವಿಶ್ವವಿದ್ಯಾನಿಲಯಗಳ ಪ್ರವೇಶ ಪ್ರಕ್ರಿಯೆ ನಡೆಯುತ್ತದೆ. ಹಿಂದಿಯಲ್ಲಿ 875, ಲೆಕ್ಕಶಾಸ್ತ್ರದಲ್ಲಿ 422, ಭೂಗೋಳ ಶಾಸ್ತ್ರದಲ್ಲಿ 326, ಇತಿಹಾಸದಲ್ಲಿ 893 ಮತ್ತು ಸಮಾಜಶಾಸ್ತ್ರದಲ್ಲಿ 261 ವಿದ್ಯಾರ್ಥಿಗಳು ಶೇಕಡ 100ರಷ್ಟು ಅಂಕ ಗಳಿಸಿದ್ದಾರೆ.

ಆರಂಭದಲ್ಲಿ ಸಿಯುಇಟಿ-ಯುಜಿ ಪರೀಕ್ಷೆಯ ಎಲ್ಲ ಹಂತಗಳನ್ನು ಆಗಸ್ಟ್ 20ರೊಳಗೆ ಮುಗಿಸಲು ನಿರ್ಧರಿಸಲಾಗಿತ್ತು. ಆದರೆ ಹಲವು ಗೊಂದಲಗಳಿಂದಾಗಿ ಪರೀಕ್ಷೆಯನ್ನು ಜುಲೈ 15 ರಿಂದ ಆಗಸ್ಟ್ 30ರ ವರೆಗೆ ಆರು ಹಂತಗಳಲ್ಲಿ ನಡೆಸಲಾಗಿತ್ತು. 259 ನಗರಗಳ 489 ಕೇಂದ್ರಗಳಲ್ಲಿ ಕಂಪ್ಯೂಟರ್ ಆಧರಿತ ಪರೀಕ್ಷೆ ನಡೆಸಲಾಗಿತ್ತು. 13 ಭಾಷೆಗಳಲ್ಲಿ 2219 ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲಾಗಿತ್ತು.

ಮೊದಲ ಆವೃತ್ತಿಯಲ್ಲಿ ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದವು. ಸುಮಾರು 60 ಕೇಂದ್ರಗಳಲ್ಲಿ ಪರೀಕ್ಷೆ ಮುಂದೂಡಲಾಗಿತ್ತು ಎಂದು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News