ಅಪ್ರಾಪ್ತ ವಯಸ್ಸಿನ ಬಾಲಕಿ ಅಪಹರಣ, ಅತ್ಯಾಚಾರ; ಇಬ್ಬರ ಬಂಧನ
ಹೈದರಾಬಾದ್: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿದ ಇಬ್ಬರು ಆಕೆಯನ್ನು ಎರಡು ಹೋಟೆಲ್‍ಗಳಿಗೆ ಕರೆದೊಯ್ದು ಸತತ ಎರಡು ದಿನಗಳ ಕಾಲ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಬಾಲಕಿಯನ್ನು ಸುರ್ಜಾನಾ ಇನ್ ಹಾಗೂ ಥ್ರೀ ಕ್ಯಾಸೆಲ್ಸ್ ಎಂಬ ಹೋಟೆಲ್‍ಗಳಿಗೆ ಕರೆದೊಯ್ದಿರುವುದು ಸಿಸಿಟಿವಿ ದೃಶ್ಯಾವಳಿಯಿಂದ ಕಂಡುಬಂದಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ. ರಾತ್ರಿ ತಂಗಿದ್ದ ಎರಡೂ ಹೋಟೆಲ್‍ಗಳಿಂದ ವಿಧಿವಿಜ್ಞಾನ ಮಾದರಿಗಳನ್ನು ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಆರೋಪಿಗಳಾದ ನಯೀಮತ್ (26) ಮತ್ತು ರಬಿಷ್ (20) ಎಂಬವರ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು, ಪೋಕ್ಸೊ ಕಾಯ್ದೆಯಡಿಯೂ ಎಫ್‍ಐಆರ್ ದಾಖಲಿಸಲಾಗಿದೆ ಎಂದು ವಿವರಿಸಿದ್ದಾರೆ.
ಸೋಮವಾರ ಸಂಜೆ ಔಷಧಿ ತರಲು ಮೆಡಿಕಲ್‍ಗೆ ಹೋಗಿದ್ದ 14 ವರ್ಷ ವಯಸ್ಸಿನ ಬಾಲಕಿಯನ್ನು ಅಪಹರಿಸಲಾಗಿದೆ ಎಂದು ಆಕೆಯ ತಾಯಿ ಮಂಗಳವಾರ ದೂರು ನೀಡಿದ್ದರು. ಕಾರೊಂದರಲ್ಲಿ ಆಕೆಯನ್ನು ಕರೆದೊಯ್ಯಲಾಗಿದೆ ಎಂಬ ಪ್ರತ್ಯಕ್ಷದರ್ಶಿ ಹೇಳಿಕೆಯನ್ನು ಆಧರಿಸಿ ಅಪಹರಣ ಪ್ರಕರಣ ದಾಖಲಿಸಲಾಗಿತ್ತು.
ಗುರುವಾರ ಬಾಲಕಿಯ ಇರುವಿಕೆ ಬಗ್ಗೆ ಸ್ಪಷ್ಟ ಸುಳಿವು ಪಡೆದ ಪೊಲೀಸರು ಆಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಇಬ್ಬರು ಆರೋಪಿಗಳನ್ನು ಬಂಧಿಸಿ ಬಾಲಕಿಯನ್ನು ಕೌನ್ಸಿಲಿಂಗ್, ವೈದ್ಯಕೀಯ ಹಾಗೂ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.
ಪುತ್ರಿಗೆ ಮಾದಕ ವಸ್ತು ನೀಡಿ ಲೈಂಗಿಕ ಹಲ್ಲೆ ನಡೆಸಲಾಗಿದೆ ಎನ್ನುವುದು ತಾಯಿಯ ಆರೋಪ. ಅತ್ಯಾಚಾರಕ್ಕೆ ಮುನ್ನ ಮಗಳಿಗೆ ಡ್ರಗ್ಸ್ ಚುಚ್ಚು ಮದ್ದು ನೀಡುವ ಜತೆಗೆ ಮದ್ಯವನ್ನೂ ಕುಡಿಸಲಾಗಿದೆ ಎಂದು ಆಪಾದಿಸಿದ್ದಾರೆ.
ಒಬ್ಬ ಆರೋಪಿ ಹೈಸ್ಕೂಲ್‍ನಿಂದ ಓದು ಬಿಟ್ಟಿದ್ದು, ಮತ್ತೊಬ್ಬ ವಿದೇಶದಲ್ಲಿದ್ದು, ಆತ ಮಾರ್ಚ್‍ನಲ್ಲಿ ವಾಪಸ್ಸಾಗಿದ್ದ. ಬಾಲಕಿ ಕೂಡಾ ಶಾಲಾ ಶಿಕ್ಷಣವನ್ನು ಅರ್ಧದಲ್ಲಿ ಬಿಟ್ಟಿದ್ದು, ತನ್ನದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ರಬಿಷ್‍ನ ಪರಿಚಯ ಇತ್ತು ಎಂದು ndtv.com ವರದಿ ಮಾಡಿದೆ.