ನೋಯ್ಡಾ: ನಾಲ್ಕು ವರ್ಷದ ಬಾಲಕಿಯ ಮೇಲೆ 'ಡಿಜಿಟಲ್ ರೇಪ್' !

Update: 2022-09-16 02:45 GMT

ನೋಯ್ಡಾ: ನಾಲ್ಕು ವರ್ಷದ ಪುಟ್ಟ ಬಾಲಕಿಯ ಮೇಲೆ ಶಾಲಾ ಆವರಣದಲ್ಲೇ ಅಪರಿಚಿತ ವ್ಯಕ್ತಿಗಳು ಅತ್ಯಾಚಾರ ನಡೆಸಿದ ಪೈಶಾಚಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ವಿದ್ಯಾರ್ಥಿನಿಯ ತಾಯಿ ಸೆಕ್ಟರ್ 39 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪುತ್ರಿಯ ಮೇಲೆ "ಡಿಜಿಟಲ್ ರೇಪ್" (ಶಿಶ್ನ ಹೊರತುಪಡಿಸಿ ದೇಹದ ಇತರ ಅಂಗ ಬಳಸಿಕೊಂಡು ಬಲವಂತದ ಲೈಂಗಿಕತೆ) ನಡೆಸಲಾಗಿದೆ ಎಂದು ಆಪಾದಿಸಿದ್ದಾರೆ.

ಸೆ. 7ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಈ ಸಂಬಂಧ ಸೆ. 9ರಂದು ತಾಯಿ ದೂರು ನೀಡಿದ್ದರು. ಶಾಲೆಯಿಂದ ಬಂದ ಬಳಿಕ ಮಗು, ಮೈ ತುರಿಸುತ್ತದೆ ಎಂದು ಹೇಳಿದಾಗ, ತಾಯಿಗೆ ಈ ಘಟನೆ ತಿಳಿದುಬಂದಿದೆ. "ದೂರಿನ ಆಧಾರದಲ್ಲಿ ಎಫ್‍ಐಆರ್ ದಾಖಲಿಸಲಾಗಿದ್ದು, ಬಾಲಕಿಯ ವೈದ್ಯಕೀಯ ತಪಾಸಣೆ ನಡಸಿದಾಗ, ಯಾವುದೇ ಬಾಹ್ಯ ಗಾಯಗಳು ಕಂಡುಬಂದಿಲ್ಲ" ಎಂದು ಹೆಚ್ಚುವರಿ ಡಿಸಿಪಿ ಅಶುತೋಷ್ ದ್ವಿವೇದಿ ಹೇಳಿದ್ದಾರೆ. ಮಗುವಿನ ಆಂತರಿಕ ತಪಾಸಣೆಗೆ ದೂರುದಾರರು ಅವಕಾಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶಾಲೆಯ ಕಾರಿಡಾರ್‌ನಲ್ಲಿ ಮಗುವಿನ ಜತೆ ಯಾರೂ ಇದ್ದುದು ಕಂಡುಬರುತ್ತಿಲ್ಲ. ದೃಶ್ಯಾವಳಿಯನ್ನು ತಾಯಿಗೂ ತೋರಿಸಲಾಗಿದೆ. ಭಾರತೀಯ ದಂಡಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮೇಲ್ನೋಟಕ್ಕೆ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದಕ್ಕೆ ಯಾವ ಪುರಾವೆಯೂ ಸಿಕ್ಕಿಲ್ಲ. ಆದಾಗ್ಯೂ ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.

ದೇಶವನ್ನೇ ಬೆಚ್ಚಿ ಬೀಳಿಸಿದ್ದ 2012ರ ನಿರ್ಭಯ ಪ್ರಕರಣದ ಬಳಿಕ ಲೈಂಗಿಕ ಅಪರಾಧದಲ್ಲಿ "ಡಿಜಿಟಲ್ ರೇಪ್" ಎಂಬ ಪ್ರತ್ಯೇಕ ವರ್ಗವನ್ನು ಸೃಷ್ಟಿಸಲಾಗಿದೆ. ಕಳೆದ ಮೇ ತಿಂಗಳಲ್ಲಿ ನೋಯ್ಡಾದಲ್ಲಿ ಇಂಥದ್ದೇ ಡಿಜಿಟಲ್ ರೇಪ್ ಪ್ರಕರಣ ದಾಖಲಾಗಿತ್ತು. 81 ವರ್ಷದ ಕಲಾವಿದ ಶಿಕ್ಷಕರೊಬ್ಬರು 17 ವರ್ಷದ ಬಾಲಕಿಗೆ ಏಳು ವರ್ಷದಿಂದ ನಿರಂತರವಾಗಿ ಡಿಜಿಟಲ್ ರೇಪ್ ನಡೆಸಿದ್ದಾರೆ ಎಂದು ಆಪಾದಿಸಲಾಗಿತ್ತು. ಈ ಬಗ್ಗೆ timesofindia.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News