ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ 8 ಚಿರತೆಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿ

Update: 2022-09-17 06:55 GMT

ಭೋಪಾಲ್: ನಮೀಬಿಯಾದಿಂದ ತರಲಾದ 8 ಚಿರತೆಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi releases 8 Namibian cheetahs at MP's Kuno National Park)ಇಂದು ಬೆಳಗ್ಗೆ ಬಿಡುಗಡೆ ಮಾಡಿದರು.

ತಮ್ಮ 72ನೇ ಹುಟ್ಟುಹಬ್ಬದ ಅಂಗವಾಗಿ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ  ನಮೀಬಿಯಾದ 8  ಚಿರತೆಗಳನ್ನು ಪ್ರಧಾನಿ ಮೋದಿ  ಬಿಡುಗಡೆ ಮಾಡಿದರು.

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.  ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 5 ಹೆಣ್ಣು ಹಾಗೂ  3 ಗಂಡು ಚಿರತೆಗಳನ್ನು ಬಿಡಲಾಯಿತು.

"1952ರಲ್ಲಿ ಚಿರತೆಗಳು ಅಳಿವಿನಂಚಿನಲ್ಲಿವೆ ಎಂದು ನಾವು ಘೋಷಿಸಿದ್ದು ದುರದೃಷ್ಟಕರ, ಆದರೆ ದಶಕಗಳಿಂದ ಅವುಗಳನ್ನು ಪುನರ್ವಸತಿ ಮಾಡಲು ಯಾವುದೇ ಅರ್ಥಪೂರ್ಣ ಪ್ರಯತ್ನ ನಡೆದಿಲ್ಲ. ಇಂದು ನಾವು ಆಝಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವಾಗ  ದೇಶವು ಹೊಸ ಶಕ್ತಿಯೊಂದಿಗೆ ಚಿರತೆಗಳಿಗೆ ಪುನರ್ವಸತಿ ಮಾಡಲು ಆರಂಭಿಸಿದೆ'' ಎಂದು  ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಾಜೆಕ್ಟ್ ಚೀತಾ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ನಮ್ಮ ಪ್ರಯತ್ನವಾಗಿದೆ. ತಜ್ಞರ ವಿವರವಾದ ಅಧ್ಯಯನದ ನಂತರ ಚಿರತೆಗಳನ್ನು ಬಿಡುಗಡೆ ಮಾಡಲು ಕುನೊ ರಾಷ್ಟ್ರೀಯ ಉದ್ಯಾನವನವನ್ನು ಆಯ್ಕೆ ಮಾಡಲಾಗಿದೆ. ಚಿರತೆಗಳು ಕುನೊದಲ್ಲಿ ಜೈವಿಕ ವೈವಿಧ್ಯತೆಯನ್ನು ಹೆಚ್ಚಿಸುತ್ತವೆ, ಪ್ರವಾಸೋದ್ಯಮವನ್ನು ಹೆಚ್ಚಿಸುತ್ತವೆ ಹಾಗೂ  ಸ್ಥಳೀಯರಿಗೆ ಆದಾಯವನ್ನು ಸೃಷ್ಟಿಸುತ್ತವೆ ಎಂದು  ಪ್ರಧಾನಿ ಮೋದಿ ಹೇಳಿದ್ದಾರೆ.

"ಈ ಐತಿಹಾಸಿಕ ದಿನದಂದು, ನಾನು ಎಲ್ಲಾ ಭಾರತೀಯರನ್ನು ಅಭಿನಂದಿಸುತ್ತೇನೆ ಹಾಗೂ  ನಮೀಬಿಯಾ ಸರಕಾರಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರ ಸಹಾಯವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News