ಸ್ಥಳೀಯ ಭಾಷೆಗಳನ್ನು ಗೌರವಿಸಿ, ಸ್ಥಳೀಯ ಭಾಷೆ ಮಾತಾಡುವವರನ್ನು ನೇಮಿಸಿ: ಇಂಡಿಗೋ ಸಂಸ್ಥೆಗೆ ತೆಲಂಗಾಣ ಸಚಿವ ಸಲಹೆ

Update: 2022-09-18 14:07 GMT
Photo- Twitter (Minister K.T. Rama Rao)

ಹೈದರಾಬಾದ್: ವಿಮಾನಯಾನ ಸಂಸ್ಥೆಗಳು ಸ್ಥಳೀಯ ಭಾಷೆಗಳನ್ನು ಗೌರವಿಸುವಂತೆ ತೆಲಂಗಾಣ ಸಚಿವ ಕೆ.ಟಿ.ಆರ್ ಆಗ್ರಹಿಸಿದ್ದಾರೆ. ವಿಮಾನ ಸಂಚರಿಸುವ ಮಾರ್ಗಗಳಲ್ಲಿ ಆಯಾ ಪ್ರದೇಶದ ಭಾಷೆ ಮಾತನಾಡಬಲ್ಲವರನ್ನು ವಿಮಾನ ಸಿಬ್ಬಂದಿಯನ್ನಾಗಿ ನೇಮಿಸಬೇಕು ಎಂದು ಅವರು ಸಲಹೆ ನೀಡಿದರು.  

ದೇವಸ್ಮಿತಾ ಚಕ್ರವರ್ತಿ ಎಂಬ ಟ್ವಿಟರ್ ಬಳಕೆದಾರರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸಚಿವ ಕೆಟಿಆರ್‌, "ಆತ್ಮೀಯ ಇಂಡಿಗೋ ಮ್ಯಾನೇಜ್‌ಮೆಂಟ್, ಇಂಗ್ಲಿಷ್ ಮತ್ತು ಹಿಂದಿ ಚೆನ್ನಾಗಿ ಮಾತನಾಡಲು ಬಾರದ ಮತ್ತು ಸ್ಥಳೀಯ ಭಾಷೆಗಳನ್ನು ಮಾತ್ರ ಮಾತನಾಡಬಲ್ಲ ಪ್ರಯಾಣಿಕರನ್ನು ಗೌರವಿಸಲು ಪ್ರಾರಂಭಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ ಪ್ರಾದೇಶಿಕ ಮಾರ್ಗಗಳಲ್ಲಿ, ತೆಲುಗು, ತಮಿಳು, ಕನ್ನಡ ಇತ್ಯಾದಿ ಸ್ಥಳೀಯ ಭಾಷೆಗಳನ್ನು ಮಾತನಾಡಬಲ್ಲ ಸಿಬ್ಬಂದಿಯನ್ನು ನೇಮಿಸಿಕೊಳ್ಳಿ. ಈ ಸಮಸ್ಯೆಗೆ ಇದು ಸರಿಯಾದ ಪರಿಹಾರ,’’ ಎಂದು   ಟ್ವೀಟ್ ಮಾಡಿದ್ದಾರೆ

‘ಸೆಪ್ಟೆಂಬರ್ 16ರಂದು ವಿಜಯವಾಡದಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನ 6ಇ 7297ರಲ್ಲಿ 2ಎ ಎಕ್ಸ್‌ಎಲ್ ಸೀಟಿನಲ್ಲಿದ್ದ ಮಹಿಳೆಗೆ ಇಂಗ್ಲಿಷ್ ಅಥವಾ ಹಿಂದಿ ಮಾತನಾಡಲು ಬರದ ಕಾರಣ ಬೇರೆ ಸೀಟಿಗೆ ಸ್ಥಳಾಂತರಿಸಲಾಗಿತ್ತು. ಆಸನ 2A XL ತುರ್ತು ನಿರ್ಗಮನ ಆಸನವಾಗಿರುವುದರಿಂದ ಸುರಕ್ಷತೆಯ ಕಾರಣದಿಂದ ಇದನ್ನು ಮಾಡಲಾಗಿದೆ ಎಂದು ಫ್ಲೈಟ್ ಅಟೆಂಡೆಂಟ್ ಹೇಳಿದ್ದಾರೆ. ಇದು ತಾರತಮ್ಯವಲ್ಲವೇ?” ಎಂದು ದೇವಸ್ಮಿತಾ ಚಕ್ರವರ್ತಿ ಟ್ವೀಟ್ ಮಾಡಿದ್ದರು.

ಕೆಟಿಆರ್‌ ಟ್ವೀಟ್‌ಗೆ ನೆಟ್ಟಿಗರು ಭಾರೀ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇಂಡಿಗೋ ವಿಮಾನದಲ್ಲಿ ಮಾತ್ರವಲ್ಲದೆ ಎಲ್ಲಾ ವಿಮಾನಗಳಲ್ಲೂ ಇದೇ ತಾರತಮ್ಯ ನಡೆಯುತ್ತಿದೆ ಎಂದು ನೆಟ್ಟಿಗರು ಆರೋಪಿಸುತ್ತಿದ್ದಾರೆ. ಇಲ್ಲಿನ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ವಿಮಾನಗಳಲ್ಲಿ ಕೆಲಸ ಮಾಡುವವರು ಪಂಜಾಬಿ ಮತ್ತು ಗುಜರಾತಿ ಭಾಷೆಯನ್ನು ಮಾತನಾಡುತ್ತಾರೆ ಆದರೆ ತೆಲುಗು ಮತ್ತು ಕನ್ನಡದಂತಹ ಭಾಷೆಗಳನ್ನು ಮಾತನಾಡುವುದಿಲ್ಲ ಎಂದು ನೆಟ್ಟಿಗರು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News