ಹುಲಿಗಳ ಸಾವಿಗೆ ಕಾರಣವೇನು?

Update: 2022-09-19 18:25 GMT

ಬೆಂಗಳೂರಿನ ಹೊರವಲಯದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಮೂರು ತಿಂಗಳಲ್ಲಿ ಮೂರು ಹುಲಿಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೂರು ವರ್ಷದ ಕಿರಣ್, ಐದು ವರ್ಷದ ಶಿವು ಸೇರಿದಂತೆ ಮೂರು ಹುಲಿಗಳು ಇತ್ತೀಚೆಗೆ ಮೃತಪಟ್ಟಿರುವುದರಿಂದ ಬನ್ನೇರುಘಟ್ಟ ಉದ್ಯಾನವನದಲ್ಲಿ ಹುಲಿಗಳ ಸಂಖ್ಯೆ 14ಕ್ಕೆ ಕುಸಿದಂತಾಗಿದೆ.

ಬನ್ನೇರುಘಟ್ಟದಲ್ಲಿರುವ ಬೆಂಗಾಲಿ ಹುಲಿಗಳಿಗೆ ವಿಚಿತ್ರ ಸೋಂಕು ತಗಲಿರುವುದೇ ಹುಲಿಗಳ ಸರಣಿ ಸಾವಿಗೆ ಕಾರಣ ಎಂದು ಅಂದಾಜಿಸಲಾಗುತ್ತಿದೆ. ಅಲ್ಲಿರುವ ಇತರ ಹುಲಿಗಳಿಗೂ ಸೋಂಕು ತಗಲುವ ಭೀತಿಯನ್ನು ತಜ್ಞರು ವ್ಯಕ್ತಪಡಿಸಿದ್ದು, ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವ ಬಗ್ಗೆ ಕರ್ನಾಟಕ ಮೃಗಾಲಯ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಗಂಭೀರ ಚಿಂತನೆ ನಡೆಸಬೇಕಿದೆ.

ರಾಷ್ಟ್ರಪ್ರಾಣಿ ಹುಲಿಗಳ ಸಂರಕ್ಷಣೆಗೆ ಸರಕಾರವು ಇತ್ತೀಚಿನ ವರ್ಷಗಳಲ್ಲಿ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಸಿನೆಮಾ ನಟರು ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಹುಲಿಗಳನ್ನು ದತ್ತು ತೆಗೆದುಕೊಳ್ಳುತ್ತಿದ್ದಾರೆ. ಆದರೂ ಹುಲಿಗಳ ಆರೋಗ್ಯದ ಬಗ್ಗೆ ನಿರ್ಲಕ್ಷ ವಹಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಹುಲಿಗಳಲ್ಲಿ ಹೊಟ್ಟೆ ನೋವು, ಮಲಬದ್ಧತೆ, ಅಜೀರ್ಣ ಮುಂತಾದ ಸಮಸ್ಯೆಗಳು ಪದೇಪದೇ ಕಾಣಿಸಿಕೊಳ್ಳುತ್ತಿದ್ದರೂ ಪಾರ್ಕ್ ಆಡಳಿತ ಮಂಡಳಿ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿಲ್ಲವೇಕೆ?. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಮುಖ್ಯ ಆಕರ್ಷಣೆಯೇ ಅಲ್ಲಿರುವ ಹುಲಿಗಳು ಹಾಗೂ ಸಿಂಹಗಳು. ಪ್ರಕೃತಿಯ ಮಡಿಲಲ್ಲಿ ಸಿಂಹಗಳು ರಾಜಾರೋಷದಿಂದ ಓಡಾಡುವುದನ್ನು ನೋಡಬಹುದಾದ ಭಾರತದ ಕೆಲವೇ ಪ್ರದೇಶಗಳಲ್ಲಿ ಇದೂ ಒಂದು ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಇಲ್ಲಿ ಅರಣ್ಯ ಇಲಾಖೆಯು ಸಿಂಹ ಮತ್ತು ಹುಲಿಗಳ ವೀಕ್ಷಣೆಗಾಗಿ ಸಫಾರಿ ವ್ಯವಸ್ಥೆ ಕಲ್ಪಿಸಿದೆ. ಸುಮಾರು 25 ಸಾವಿರ ಎಕರೆಯಷ್ಟು ವಿಸ್ತಾರ ಹೊಂದಿರುವ ಉದ್ಯಾನವನವು ಹುಲಿ, ಸಿಂಹ, ಚಿರತೆ, ಕಾಡುಕೋಣ, ಜಿಂಕೆ, ಕರಡಿಗಳು ಹಾಗೂ ಹಲವು ಬಗೆಯ ಪಕ್ಷಿಗಳನ್ನು ಹೊಂದಿರುವುದರಿಂದ ಸಂಬಂಧಿತ ಇಲಾಖೆ ಈ ವನ್ಯಜೀವಿಗಳ ರಕ್ಷಣೆಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗಿದೆ.

Writer - -ದಿವ್ಯಶ್ರೀ ವಿ., ಬೆಂಗಳೂರು

contributor

Editor - -ದಿವ್ಯಶ್ರೀ ವಿ., ಬೆಂಗಳೂರು

contributor

Similar News