ಬಿಜೆಪಿ ಆಡಳಿತದಲ್ಲಿ ದೇಶದಲ್ಲಿ ಪ್ರತಿ ಗಂಟೆಗೆ ಒಬ್ಬ ರೈತ ಆತ್ಮಹತ್ಯೆ: ಕಾಂಗ್ರೆಸ್ ಆರೋಪ

Update: 2022-09-20 13:59 GMT
ಸುಪ್ರಿಯಾ ಶ್ರೀನಾಠೆ (PTI)

ಹೊಸದಿಲ್ಲಿ: ಆಡಳಿತ ಬಿಜೆಪಿ(BJP) ಸರಕಾರದ ನೀತಿಗಳು ರೈತರ ಆತ್ಮಹತ್ಯೆಗಳಿಗೆ ಕಾರಣ, ದೇಶದಲ್ಲಿ ಪ್ರತಿ ಗಂಟೆಗೆ ಒಬ್ಬ ರೈತ ಆತ್ಮಹತ್ಯೆಗೈಯ್ಯುತ್ತಿದ್ದಾನೆ, ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಠೆ(Congress spokesperson Supriya Shrinate) ಹೇಳಿದ್ದಾರೆ.

ಪುಣೆಯಲ್ಲಿ ಪ್ರಧಾನಿ ಮೋದಿಯನ್ನು ದೂರಿ ಸುಸೈಡ್ ನೋಟ್ ಬರೆದಿಟ್ಟು ರೈತ ದಶರಥ ಲಕ್ಷ್ಮಣ್ ಕೇದರಿ ಎಂಬಾತ ಸೆಪ್ಟೆಂಬರ್ 17ರಂದು ಆತ್ಮಹತ್ಯೆಗೈದ ಪ್ರಕರಣದ ಹಿನ್ನೆಲೆಯಲ್ಲಿ ಅವರು ಸುದ್ದಿಗಾರರ ಜೊತೆಗೆ ಮಾತನಾಡುತ್ತಿದ್ದರು.

"ತನ್ನ ಸಾವಿಗೆ ಬಿಜೆಪಿ ಸರಕಾರದ ನೀತಿಗಳೇ ಕಾರಣ ಮತ್ತು ಪ್ರಧಾನಿಗೆ ತಮ್ಮ ಬಗ್ಗೆ ಮಾತ್ರ ಕಾಳಜಿಯಿದೆ ಎಂದು ರೈತ ತನ್ನ ಸುಸೈಡ್ ನೋಟ್‍ನಲ್ಲಿ ಹೇಳಿದ್ದಾನೆ,'' ಎಂದು ಸುಪ್ರಿಯಾ ಹೇಳಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ 10,881 ಜನರು ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ವರದಿಯಾದ 1,64,033 ಆತ್ಮಹತ್ಯೆ ಪ್ರಕರಣಗಳ ಪೈಕಿ ಇದು ಶೇ 6.6 ರಷ್ಟಾಗಿದೆ ಎಂದು ಅವರು ಹೇಳಿದರು. ಅಂಕಿಅಂಶಗಳನ್ನು ಗಮನಿಸಿದಾಗ ಪ್ರತಿ ಗಂಟೆಗೆ ಒಂದಕ್ಕಿಂತ ಹೆಚ್ಚು ರೈತರು ಆತ್ಮಹತ್ಯೆಗೈಯ್ಯುತ್ತಿದ್ದಾರೆ ಹಾಗೂ ಪ್ರತಿ ದಿನ 30 ರೈತರು ಆತ್ಮಹತ್ಯೆಗೈಯ್ಯುತ್ತಿದ್ದಾರೆ ಎಂದು ಅವರು ಹೇಳಿದರು.

ನ್ಯಾಷನಲ್ ಕ್ರೈಂ ರೆಕಾಡ್ರ್ಸ್ ಬ್ಯುರೋ ಅಂಕಿಅಂಶಗಳನ್ನು ಉಲ್ಲೇಖಿಸಿದ ಅವರು 2014 ಹಾಗೂ 2021ರ ನಡುವೆ 53,881ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇದರರ್ಥ ಪ್ರತಿ ದಿನ 21 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ರೈತರ ಸಮಸ್ಯೆಗಳಿಗೆ ಸರಕಾರದ ನೀತಿಗಳು ಕಾರಣ ಎಂದು ಹೇಳಿದ ಅವರು ಕಳೆದ ವರ್ಷ ಕೃಷಿ ಕಾಯಿದೆಗಳ ವಿರುದ್ಧ ನಡೆದ ವರ್ಷ ಪೂರ್ತಿ ಪ್ರತಿಭಟನೆಗಳ ವೇಳೆ 700ಕ್ಕೂ ಅಧಿಕ ರೈತರು ಮೃತಪಟ್ಟಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಖ್ಯಾತ ತಮಿಳು ನಟಿ ಪೌಲಿನ್ ಜೆಸ್ಸಿಕಾ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News