ಖ್ಯಾತ ತಮಿಳು ನಟಿ ಪೌಲಿನ್ ಜೆಸ್ಸಿಕಾ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಪೌಲಿನ್ ಜೆಸ್ಸಿಕಾ (Photo: Instagram)
ಚೆನ್ನೈ: ಖ್ಯಾತ ತಮಿಳು ನಟಿ ಪೌಲಿನ್ ಜೆಸ್ಸಿಕಾ ಅವರು ಸೆಪ್ಟೆಂಬರ್ 18 ರಂದು ಚೆನ್ನೈನ ವಿರುಗಂಬಕ್ಕಂ ಮಲ್ಲಿಕಾ ಅವೆನ್ಯೂದಲ್ಲಿನ ಬಾಡಿಗೆ ಫ್ಲಾಟ್ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಆಂಧ್ರಪ್ರದೇಶದವರಾದ ದೀಪಾ ಎಂದೇ ಜನಪ್ರಿಯವಾಗಿರುವ ಪೌಲಿನ್ ಜೆಸ್ಸಿಕಾ ಇತ್ತೀಚೆಗೆ ಬಿಡುಗಡೆಯಾದ ತಮಿಳು ಸಿನಿಮಾ 'ವೈಧಾ'ದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದಲ್ಲದೆ, ಅವರು ವಿವಿಧ ತಮಿಳು ಚಲನಚಿತ್ರಗಳು ಹಾಗೂ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ.
ಜನಪ್ರಿಯ ನಟಿ ದೀಪಾ ಸೆಪ್ಟೆಂಬರ್ 18 ರ ರವಿವಾರದಂದು ತನ್ನ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇದಕ್ಕೂ ಮುನ್ನ ಕೋಯಂಬೇಡು ಪೊಲೀಸರು ನಟಿಯ ಸಾವಿನ ಬಗ್ಗೆ ನಟಿಯ ನೆರೆಹೊರೆಯವರಿಂದ ಮಾಹಿತಿ ಪಡೆದಿದ್ದರು. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಲ್ಪಾಕ್ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ.
ನಂತರ, ನಟಿಯ ಸಂಬಂಧಿಕರಿಗೆ ವಿಷಯ ತಿಳಿಸಲಾಯಿತು ಮತ್ತು ನಟಿಯ ಮೃತದೇಹವನ್ನು ಆಂಧ್ರಪ್ರದೇಶಕ್ಕೆ ಕಳುಹಿಸಲಾಯಿತು.
"ಜನಪ್ರಿಯ ನಟಿ ಪೌಲಿನ್ ಜೆಸ್ಸಿಕಾ ಅವರ ಆತ್ಮಹತ್ಯೆಯ ಬಗ್ಗೆ ನಾವು ಎಲ್ಲಾ ಕಡೆಯಿಂದ ತನಿಖೆ ನಡೆಸುತ್ತಿದ್ದೇವೆ ಹಾಗೂ ಸಿಸಿಟಿವಿ ಸಹಾಯವನ್ನು ತೆಗೆದುಕೊಳ್ಳುತ್ತಿದ್ದೇವೆ" ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಆತ್ಮಹತ್ಯೆ ಪತ್ರವೊಂದು ಪತ್ತೆಯಾಗಿದ್ದು, ಅದರಲ್ಲಿ ಸಂಬಂಧ ಮುರಿದುಬಿದ್ದಿರುವುದು ತನ್ನ ಸಾವಿಗೆ ಪ್ರಮುಖ ಕಾರಣ ಎಂದು ನಟಿ ನಮೂದಿಸಿದ್ದಾರೆ.