ಹೊಸ ರೈಲು ಸಂಚರಿಸಲಿ

Update: 2022-09-20 18:21 GMT

ಈಗ ಸಂಚರಿಸುತ್ತಿರುವ ಬೆಂಗಳೂರು-ಮೈಸೂರು-ಮಂಗಳೂರು ರೈಲನ್ನು ಕಾರವಾರ ತನಕ ವಿಸ್ತರಿಸಬೇಕೆಂಬ ಬೇಡಿಕೆ ಕೇಳಿ ಬರುತ್ತಿದೆ. ಆದರೆ ಈ ರೈಲಿನಿಂದ ಉಡುಪಿ, ಕಾರವಾರ ಭಾಗಕ್ಕೆ ಹೋಗುವ ಪ್ರಯಾಣಿಕರಿಗೆ ಯಾವುದೇ ಪ್ರಯೋಜನವಾಗದು. ಯಾಕೆಂದರೆ ಬೆಂಗಳೂರಿನಿಂದ ರಾತ್ರಿ 8:30ರಿಂದ ಹೊರಡುವ ಈ ರೈಲು ಮೈಸೂರು ತಲುಪುವಾಗ ರಾತ್ರಿ 11:00 ಗಂಟೆ, ಮಂಗಳೂರು ಜಂಕ್ಷನ್ ತಲುಪುವಾಗ ಮರುದಿನ ಬೆಳಗ್ಗೆ 8:30 ಆಗುತ್ತದೆ. ಇದೇ ವೇಳಾಪಟ್ಟಿ ಪ್ರಕಾರ ಕಾರವಾರಕ್ಕೆ ವಿಸ್ತರಣೆ ಆದರೆ ಉಡುಪಿ ತಲುಪುವಾಗ ಬೆಳಗ್ಗೆ 11:00 ಗಂಟೆ, ಕಾರವಾರ ತಲುಪುವಾಗ ಮಧ್ಯಾಹ್ನ 1 ಗಂಟೆ ಆಗುತ್ತದೆ. ಅದೇ ದಿನ ಮಧ್ಯಾಹ್ನ 2 ಗಂಟೆಗೆ ಕಾರವಾರದಿಂದ ಹೊರಡಬೇಕಾಗಿರುವ ಈ ರೈಲು ಮಂಗಳೂರು ಜಂಕ್ಷನಿಗೆ ಸಂಜೆ 6:30ಕ್ಕೆ ತಲುಪಬೇಕಾದ ಅವಶ್ಯಕತೆಯಿದೆ. ಮಂಗಳೂರು ಜಂಕ್ಷನ್‌ನಿಂದ ಸಂಜೆ 6:45ಕ್ಕೆ ಹೊರಡುವ ಈ ರೈಲು ಮೈಸೂರು ತಲುಪುವಾಗ ಮರುದಿನ ಬೆಳಗ್ಗೆ 3 ಗಂಟೆಯಾಗುತ್ತದೆ ಹಾಗೂ ಬೆಳಗ್ಗೆ 6:30ಕ್ಕೆ ಬೆಂಗಳೂರಿಗೆ ತಲುಪುತ್ತದೆ. ಇದರಿಂದ ಆ ಭಾಗಕ್ಕೆ ಪ್ರಯಾಣಿಸಬೇಕಾದವರು ಈ ರೈಲಿನಲ್ಲಿ ಪ್ರಯಾಣಿಸ ಬಯಸುವುದಿಲ್ಲ. ಆದ್ದರಿಂದ ಈ ರೈಲನ್ನು ವಿಸ್ತರಿಸುವ ಬದಲು ಸೂಕ್ತ ಸಮಯಕ್ಕೆ ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಅಥವಾ ಸ್ವತಃ ಮೈಸೂರಿನಿಂದಲೇ ಕಾರವಾರಕ್ಕೆ ನೇರವಾಗಿ ಪಡೀಲ್ ಬೈಪಾಸ್ ಮಾರ್ಗವಾಗಿ ಹೊಸ ರೈಲು ಆರಂಭಿಸಿದರೆ ಉಡುಪಿ-ಕಾರವಾರ ಭಾಗಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ತುಂಬಾ ಉಪಕಾರಿಯಾಗಲಿದೆ. ಆದ್ದರಿಂದ ಮೈಸೂರು, ಉಡುಪಿ, ಕಾರವಾರ ಭಾಗದ ಜನಪ್ರತಿನಿಧಿಗಳು ಈಗಿರುವ ರೈಲನ್ನು ವಿಸ್ತರಿಸುವ ಬದಲು, ಮೈಸೂರಿನಿಂದ ಕಾರವಾರಕ್ಕೆ (ಮಂಗಳೂರು ಹೊರಗಿನ ಪಡೀಲ್ ಮುಖಾಂತರ) ಹೊಸ ರೈಲಿಗೆ ಬೇಡಿಕೆ ಇಡಲಿ. ಈಗಿನ ಮಂಗಳೂರು-ಮೈಸೂರು ರೈಲಿನ ವಿಸ್ತರಣೆ ಬೇಡ.

Writer - -ಪೃಥ್ವಿ ಭಂಡಾರಿ, ಉಡುಪಿ

contributor

Editor - -ಪೃಥ್ವಿ ಭಂಡಾರಿ, ಉಡುಪಿ

contributor

Similar News