ಉತ್ತರಪ್ರದೇಶ: ಶಿಕ್ಷಕ, ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಸಹರಾನ್‌ಪುರ (ಯುಪಿ): 40 ವರ್ಷದ ಶಾಲಾ ಶಿಕ್ಷಕ ಹಾಗೂ ವಿದ್ಯಾರ್ಥಿನಿ ಇಲ್ಲಿನ ಅರಣ್ಯವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಬ್ಬರ ಮಧ್ಯೆ ಅನೈತಿಕ ಸಂಬಂಧ ಇತ್ತು ಎಂದು ಹೇಳಲಾಗುತ್ತಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಶಾಲೆಯ ಶಿಕ್ಷಕ ಹಾಗೂ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ 17 ವರ್ಷದ ಬಾಲಕಿ ಮಂಗಳವಾರ ತಡರಾತ್ರಿ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ಟಾಡಾ ತಿಳಿಸಿದ್ದಾರೆ.
ಶಿಕ್ಷಕ ತಾನು ಕೆಲಸ ಮಾಡುತ್ತಿದ್ದ ಶಾಲೆಯಲ್ಲಿಯೇ ಓದುತ್ತಿದ್ದ ಬಾಲಕಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈ ಇಬ್ಬರು ಸೆಪ್ಟೆಂಬರ್ 3 ರಿಂದ ಕಾಣೆಯಾಗಿದ್ದಾರೆ ಎಂದು ಟಾಡಾ ಹೇಳಿದರು.
ಬಾಲಕಿಯ ಕುಟುಂಬವು ಅಪಹರಣದ ದೂರು ದಾಖಲಿಸಿತ್ತು. ಪೊಲೀಸರು ಇಬ್ಬರಿಗಾಗಿ ಹುಡುಕಲು ಆರಂಭಿಸಿದರು ಆದರೆ ಶಿಕ್ಷಕ ಹಾಗೂ ವಿದ್ಯಾರ್ಥಿನಿ ಸ್ಥಳ ಬದಲಾಯಿಸಿದ್ದರಿಂದ ಅವರನ್ನು ತಕ್ಷಣವೇ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.
ಸಂಜೆ, ಆ ಪ್ರದೇಶದಲ್ಲಿ ದುರ್ವಾಸನೆ ಬರಲಾರಂಭಿಸಿದಾಗ ಪೊಲೀಸ್ ತಂಡವು ಕಾಡಿಗೆ ತೆರಳಿತು ಹಾಗೂ ಎರಡು ಮೃತ ದೇಹಗಳು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಕಂಡುಬಂದವು ಎಂದು ಟಾಡಾ ಹೇಳಿದರು.
ಮೃತದೇಹಗಳ ಸ್ಥಿತಿ ನೋಡಿದರೆ ಇಬ್ಬರೂ ಹತ್ತು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಾಣುತ್ತಿದೆ. ಈ ಪ್ರದೇಶದಿಂದ ಬೈಕನ್ನು ಸಹ ವಶಪಡಿಸಿಕೊಳ್ಳಲಾಗಿದೆ, ಆದರೆ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.